ಮೂರು ದಿನ ಮುಂಚೆ ಮುಂಗಾರು ಪ್ರವೇಶ

ನವದೆಹಲಿ ,ಮೇ.೧೪- ಮುಂಗಾರು ಮಾರುತಗಳ ಬಗ್ಗೆ ಹವಾಮಾನ ಇಲಾಖೆ ಸಂತಸದ ಸುದ್ದಿ ನೀಡಿದೆ. ಪ್ರಸ್ತುತ ನೈಋತ್ಯ ಮುಂಗಾರು ನಿಗದಿತ ಸಮಯಕ್ಕಿಂತ ಮೂರು ದಿನ ಮುಂಚಿತವಾಗಿ ಆಗಮಿಸಲಿದೆ ಎಂದು ಹವಾಮಾನ ಇಲಾಖೆ ಇತ್ತೀಚಿನ ನವೀಕರಣದಲ್ಲಿ ತಿಳಿಸಿದೆ.
ಈ ವರ್ಷ ಹೆಚ್ಚಿನ ಮಳೆ ದಾಖಲಾಗಲಿದೆ ಎಂದು ಘೋಷಿಸಿರುವ ಅಧಿಕಾರಿಗಳು ಮುಂಗಾರು ಬೇಗ ಬರಲಿದೆ ಎಂದು ಬಹಿರಂಗಪಡಿಸಿದ್ದಾರೆ.
ಇಲಾಖೆ ಪ್ರಕಾರ, ನೈಋತ್ಯ ಮುಂಗಾರು ಮೇ ೧೯ ರ ಸುಮಾರಿಗೆ ದೇಶದ ದಕ್ಷಿಣ ಅಂಡಮಾನ್ ನಿಕೋಬಾರ್ ಸಮುದ್ರವನ್ನು ಪ್ರವೇಶಿಸಲಿದೆ. ಅದೇ ದಿನ ಬಂಗಾಳಕೊಲ್ಲಿಯ ಆಗ್ನೇಯ ಭಾಗದ ಕೆಲವು ಪ್ರದೇಶಗಳನ್ನೂ ಪ್ರವೇಶಿಸಲಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಮೇ ೨೨ ರಂದು ಮುಂಗಾರು ಈ ಭಾಗವನ್ನು ತಲುಪುತ್ತದೆ, ಆದರೆ ಈ ವರ್ಷ ಅದು ಮೂರು ದಿನಗಳ ಮೊದಲು (ಮೇ ೧೯) ಪ್ರವೇಶಿಸಲಿದೆ.
ಕಳೆದ ಕೆಲವು ವರ್ಷಗಳಿಂದ, ಭಾರತದಲ್ಲಿ ಮಾನ್ಸೂನ್ ಜೂನ್ ೧ ರ ಸುಮಾರಿಗೆ ದಕ್ಷಿಣದ ಕೇರಳ ರಾಜ್ಯವನ್ನು ಮುಟ್ಟುತ್ತದೆ. ಇದರ ನಂತರ, ಇದು ಹೆಚ್ಚಿನ ವೇಗದಲ್ಲಿ ಉತ್ತರದ ರಾಜ್ಯಗಳ ಕಡೆಗೆ ಚಲಿಸುತ್ತದೆ ಮತ್ತು ಜುಲೈ ೧೫-೨೦ ರ ಸುಮಾರಿಗೆ ಇಡೀ ದೇಶವನ್ನು ಆವರಿಸುತ್ತದೆ. ಮೂರು ದಿನ ಮುಂಚಿತವಾಗಿ ಮುಂಗಾರು ಆಗಮನವಾಗಿರುವುದರಿಂದ ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಏಪ್ರಿಲ್ ೧೫ ರಂದು ತನ್ನ ಮುನ್ಸೂಚನೆಯಲ್ಲಿ ಜೂನ್ ಮತ್ತು ಸೆಪ್ಟೆಂಬರ್ ನಡುವೆ, ದೇಶದಲ್ಲಿ ಮಾನ್ಸೂನ್ ಮಳೆಯನ್ನು ನೀರಿಕ್ಷಿಸಲಾಗಿದೆ ಎಂದು ಹೇಳಿದೆ.
ಮೇ ಕೊನೆಯ ವಾರದಲ್ಲಿ ಮತ್ತೊಮ್ಮೆ ಮುನ್ಸೂಚನೆ ನೀಡಲಾಗುವುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದರಲ್ಲಿ ವಾಯುವ್ಯ ಭಾರತ, ಮಧ್ಯ ಭಾರತ, ದಕ್ಷಿಣ ಪೆನಿನ್ಸುಲಾ ಮತ್ತು ಈಶಾನ್ಯ ಭಾರತದಲ್ಲಿ ಮಾನ್ಸೂನ್ ಸ್ಥಿತಿ ಮತ್ತು ಮುನ್ಸೂಚನೆಯ ಮಾಹಿತಿಯನ್ನು ನವೀಕರಿಸಲಾಗುತ್ತದೆ.