ಮೂರು ದಿನ ಮಹಾದಾಸೋಹಿ ಶರಣಬಸವೇಶ್ವರರ ಮಹಾತ್ಮೆ ಭಕ್ತಿಪ್ರಧಾನ ನಾಟಕ

ಕಲಬುರಗಿ:ಏ.7: ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಹಾಗೂ 18ನೇ ಶತಮಾನದ ಸಂತ ಶ್ರೀ ಶರಣಬಸವೇಶ್ವರರ 202ನೇ ಜಾತ್ರಾ ಮಹೋತ್ಸವದಂಗವಾಗಿ, ಪರಮ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾ ಹವ್ಯಾಸಿ ಕಲಾ ಬಳಗದ ವತಿಯಿಂದ ಸಾದರ ಪಡಿಸುವ, ಭಕ್ತಿಪ್ರಧಾನ ನಾಟಕ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಮಹಾತ್ಮೆ ಇದೇ ಏಪ್ರಿಲ್ ತಿಂಗಳ ದಿನಾಂಕ 08, 09 ಹಾಗೂ 10ನೇ ತಾರೀಖಿನಂದು ಪ್ರತಿದಿನ ಸಾಯಂಕಾಲ 6.30ಕ್ಕೆ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿರುವ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಪ್ರದರ್ಶನಗೊಳ್ಳಲಿದೆ.
ಕಲ್ಯಾಣ ಕರ್ನಾಟಕದ ಎಲ್ಲಾ ಸಧ್ಬಕ್ತರು ಹಾಗೂ ಕಲಾಭಿಮಾನಿಗಳು ಈ ಭಕ್ತಿಪ್ರಧಾನ ನಾಟಕವನ್ನು ವೀಕ್ಷಿಸಿ ಶರಣರ ಕೃಪೆಗೆ ಪಾತ್ರರಾಗಬೇಕೆಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಮನವಿ ಮಾಡಿದ್ದಾರೆ.
ಮಕ್ಕಳಿಲ್ಲದವರಿಗೆ ಬಂಜೆತನ ಹೋಗಲಾಡಿಸಿ, ಮಕ್ಕಳ ಫಲವನ್ನು ನೀಡಿ, ತಾಯಿತನವನ್ನು ಎತ್ತಿ ಹಿಡಿದು ಪ್ರಾಣಿ ಪಕ್ಷಿಗಳನ್ನು ಪ್ರೀತಿಸಿ, ಪಾಲಿಗೆ ಬಂದ ಹೊಲದಲ್ಲಿ ಶ್ರದ್ಧೆ ನಿಷ್ಟೆಯಿಂದ, ದೇಹ ದಂಡಿಸಿ, ದುಡಿಮೆ ಮಾಡಿ, ಫಲವತ್ತಾದ ಫಸಲು ಪಡೆದು ಇನ್ನಿತರರಿಗೆ ಮಾದರಿಯಾಗಿ ನಿಲ್ಲುವ ಮಹಾ ಶರಣರೇ ಕಲಬುರಗಿಯ ಶ್ರೀ ಶರಣಬಸವೇಶ್ವರರು. ಇದೆಲ್ಲವೂ ನಾಟಕ ರೂಪದಲ್ಲಿ ಪ್ರದರ್ಶನಗೊಳ್ಳಲಿದೆ.
ದಾಸೋಹದ ಕಾಯಕದಲ್ಲಿ ಗುರುಲಿಂಗ ಜಂಗಮರ ಸೇವೆಯನ್ನೇ ಪರಶಿವನ ಸೇವೆ ಎಂದು ನಂಬಿದ್ದರು. ಜಂಗಮ ಮುನಿದರೆ ಜಗವೇ ನೊಂದಂತೆ ಎಂಬ ಅಪಾರ ಭಕ್ತಿಯನ್ನಿಟ್ಟಿದ್ದರು. ಅಲ್ಲದೇ ಎಪ್ಪಾ ತಂದೆ ಶರಣಬಸಪ್ಪಾ ಎಂದು ನಂಬಿ ಬಂದವರಿಗೆ ಹೋಳಿಗಿ ತುಪ್ಪ ತಿನಿಸಿ ಮಕ್ಕಳ ಭಾಗ್ಯ ಕೊಟ್ಟು ಕಳಿಸಿದ ಪುಣ್ಯಾತ್ಮರ ಚರಿತ್ರೆಯನ್ನು ವಿನೂತನ ರೀತಿಯ ಶೈಲಿಯಲ್ಲಿ ರಂಗ ವೇದಿಕೆಯ ಮೇಲೆ ನಾಟಕ ರೂಪದಲ್ಲಿ ಕಲಬುರಗಿ ಜಿಲ್ಲೆಯ ಆಯಾ ತಾಲೂಕಿನಿಂದ ಪ್ರತಿಭಾವಂತ ಕಲಾವಿದರಿಂದ ಆಭಿನಯಿಸಲ್ಪಡುವ ಈ ನಾಟಕಕ್ಕೆ ಹೆಚ್ಚಿನ ರೀತಿಯಲ್ಲಿ ಭಕ್ತರು, ತಾಯಂದಿರು ಹಾಗೂ ಕಲಾಭಿಮಾನಿಗಳು ಆಗಮಿಸಿ ನಾಟಕ ವೀಕ್ಷಿಸಿ ಶ್ರೀ ಶರಣಬಸವೇಶ್ವರರ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ಎಲ್ಲಾ ಸದ್ಭಕ್ತರಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರು ವಿನಂತಿಸಿದ್ದಾರೆ.