ಮೂರು ದಿನದೊಳಗೆ ಕಬ್ಬಿಗೆ ನಿಗದಿತ ಬೆಲೆ ಘೋಷಣೆಗೆ ಆಗ್ರಹ

ಭಾಲ್ಕಿ,ನ.19: ಕಲ್ಯಾಣ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಕರ್ನಾಟಕ ರೈತ ಸಂಘ(ಪುಟ್ಟಣಯ್ಯ ಬಣ)ದ ಘಟಕಕ್ಕೆ ಸೇರ್ಪಡೆ ಆಗಲು ನಿರ್ಧರಿಸಿದ್ದಾರೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರೈತರ ನ್ಯಾಯ ಸಮ್ಮತ ಬೇಡಿಕೆ ಈಡೇರಿಕೆಗಾಗಿ ಅನೇಕ ರೈತಪರ ಸಂಘಟನೆಗಳು ಹೋರಾಟ ಮಾಡುತ್ತ ಬರುತ್ತಿವೆ. ಅಂತಹ ಸಂಘಟನೆಯಲ್ಲಿ ಕಲ್ಯಾಣ ಕರ್ನಾಟಕ ರೈತ ಸಂಘದ ಹಲವಾರು ಪದಾಧಿಕಾರಿಗಳು ಒಗ್ಗಟ್ಟು ಪ್ರದರ್ಶಿಸಲು ರಾಜ್ಯ ರೈತ ಸಂಘಕ್ಕೆ ಸೇರ್ಪಡೆ ಆಗುತ್ತಿರುವುದು ಹೊಸ ಶಕ್ತಿ, ಹುಮಸ್ಸು ಬಂದಂತಾಗಿದ್ದು, ಡಿ.5 ರಂದು ಕಲಬುರಗಿಯಲ್ಲಿ ರಾಜ್ಯ ರೈತ ಸಂಘಕ್ಕೆ ಸೇರ್ಪಡೆ ಆಗಲು ನಿರ್ಧಾರ ಕೈಗೊಂಡಿದ್ದಾರೆ ಎಂದರು.

ಜಿಲ್ಲಾಡಳಿತ ಮೂರು ದಿನದೊಳಗೆ ಜಿಲ್ಲೆಯ ಎಲ್ಲ ಸಕ್ಕರೆ ಕಾರಖಾನೆಯ ಅಧ್ಯಕ್ಷರ ಜತೆ ಸಭೆ ನಡೆಸಿ ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂ ಘೋಷಣೆ ಮಾಡಬೇಕು. ಇಲ್ಲದಿದ್ದರೇ ಜಿಲ್ಲಾಡಳಿತ ಹಾಗೂ ಸಕ್ಕರೆ ಕಾರಖಾನೆ ಮಾಲೀಕರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಂಗಾರು ಹಂಗಾಮನಿಲ್ಲಿ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಎಲ್ಲ ಬೆಳೆದ ಬೆಳಗಳು ಸಂಪೂರ್ಣವಾಗಿ ನಾಶವಾಗಿದ್ದು, ಬೆಳೆ ವಿಮೆ ಕಟ್ಟಿದ ಎಲ್ಲ ರೈತರಿಗೆ ತಕ್ಷಣ ಪರಿಹಾರ ನೀಡಬೇಕು. ಬೆಳೆ ವಿಮೆ ಕಟ್ಟದ ರೈತರಿಗೆ ಎಕರೆಗೆ ಕನಿಷ್ಠ 25 ಸಾವಿರ ರೂ ಪರಿಹಾರ ನೀಡಬೇಕು. ಜತೆಗೆ ಮಹಾಮಳೆಯಿಂದ ಮಂಜಾ, ಚುಳಕಿ ನಾಲಾ ಮತ್ತು ಕಾರಂಜಾ ನದಿ ದಡದಲ್ಲಿ ರೈತರು ಕಟಾವು ಮಾಡಿಟ್ಟ ಸೋಯಾಬಿನ್, ಹೆಸರು ಫಸಲು ಕೊಚ್ಚಿಕೊಂಡು ಹೋಗಿದ್ದು, ರಾಜ್ಯ ಸರಕಾರ ವಿಶೇಷ ಪ್ಯಾಕೇಜ್ ನೀಡಬೇಕು ಹಾಗೂ ಹಿಂಗಾರು ಹಂಗಾಮಿನಲ್ಲಿಯು ಕೂಡ ರೈತರು ಬೆಳೆ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಇದಕ್ಕೂ ಪರಿಹಾರ ನೀಡಬೇಕು. ಜತೆಗೆ ಬೆಳಗ್ಗಿನ ಅವಧಿಯಲ್ಲಿ 12 ಗಂಟೆ ವಿದ್ಯುತ್ ನೀಡಿ ರೈತರಿಗೆ ನೆರವಾಗಬೇಕು. ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಬಡ ರೈತರ ಮನೆಗಳು ಕುಸಿದಿದ್ದು ಪರಿಹಾರ ನೀಡಬೇಕು. ಇವುಗಳೊಂದಿಗೆ ರೈತರ ಕುಟುಂಬಗಳಿಗೆ ಪ್ರತಿ ತಿಂಗಳು ಕನಿಷ್ಠ 3 ಲೀಟಿರ್ ಸೀಮೆ ಎಣ್ಣೆ ನೀಡಬೇಕು ಇಲ್ಲದಿದ್ದರೇ ರೈತರೊಂದಿಗೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಲ್ಯಾಣ ಕರ್ನಾಟಕ ರೈತ ಸಂಘದ ಉಪಾಧ್ಯಕ್ಷ ಆದಿನಾಥ ಹೀರಾ ಮಾತನಾಡಿ, ಕಲ್ಯಾಣ ಕರ್ನಾಟಕ ರೈತ ಸಂಘದ ಹೋರಾಟ ನಿಷ್ಕ್ರೀಯಗೊಂಡಿರುವ ಹಿನ್ನೆಲೆಯಲ್ಲಿ ರೈತರ ಬೇಡಿಕೆ ಈಡೇರಿಕೆಗಾಗಿ ಕಲ್ಯಾಣ ಕರ್ನಾಟಕ ಭಾಗದ ನೂರಾರು ರೈತರು ರಾಜ್ಯ ರೈತ ಸಂಘಕ್ಕೆ ಸೇರ್ಪಡೆ ಆಗಲು ನಿರ್ಧರಿಸಿರುವುದಾಗಿ ತಿಳಿಸಿದರು.

ಕಲ್ಯಾಣ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ನಾಗಶೆಟೆಪ್ಪ ಲಂಜವಾಡೆ ಮಾತನಾಡಿ, ರೈತರ ಬೇಡಿಕೆ ಮತ್ತು ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಅವರ ನ್ಯಾಯಯುತ ಹೋರಾಟವನ್ನು ಪರಿಗಣಿಸಿ ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸಲು ರೈತ ಸಂಘಕ್ಕೆ ಸೇರ್ಪಡೆ ಆಗಲು ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಲಬುರಗಿ ವಿಭಾಗದ ರೈತ ಮುಖಂಡರಾದ ಸುಭಾಶ ಚಿತಕೋಟೆ, ಗಾಂಧಿ ಬಿರಾದಾರ್, ಕ್ಷಣಮುಖ ಬಿರಾದಾರ್, ಸಿದ್ರಾಮಪ್ಪ ಜಿಡಗೆ, ಪ್ರಕಾಶ ಭುಸಣಗೆ, ಜಿಲ್ಲೆಯ ಮುಖಂಡರಾದ ವಿಠಲ ಮೇತ್ರೆ, ಸುಭಾಷ ಇಟಗೆ, ಯುವ ಘಟಕದ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾಂತಾಬಾಯಿ, ಬಾಬುರಾವ ಕಾರಬಾರಿ ಸೇರಿದಂತೆ ಹಲವರು ಇದ್ದರು.