ಮೂರು ದಿನಗಳ ಶ್ರೀ ಶರಣಬಸವೇಶ್ವರ್ ಮಹಾತ್ಮೆ ನಾಟಕ ಪ್ರದರ್ಶನ

ಕಲಬುರಗಿ: ಮಾ 10: ಶ್ರೀ ಶರಣಬಸವೇಶ್ವರ್ ಜಾತ್ರಾ ಮಹೋತ್ಸವದ ನಿಮಿತ್ಯ ಜಾತ್ರಾ ಮೈದಾನದಲ್ಲಿ ಮಾರ್ಚ್ 11,12 ಮತ್ತು 13ರಂದು ಒಟ್ಟು ಮೂರು ದಿನಗಳ ಕಾಲ ಶ್ರೀ ಶರಣಬಸವೇಶ್ವರ್ ಮಹಾತ್ಮೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪರಮಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾ ಹವ್ಯಾಸಿ ಕಲಾ ಬಳಗದ ಅಧ್ಯಕ್ಷ ರಮೇಶ್ ಜಿ. ತಿಪ್ಪನೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಟಕ ವೀಕ್ಷಣೆಗೆ ಯಾವುದೇ ಟಿಕೆಟ್ ದರ ನಿಗದಿಪಡಿಸಿಲ್ಲ. ಉಚಿತ ಪ್ರವೇಶವಿದೆ. ಕಲ್ಯಾಣ ಕರ್ನಾಟಕದ ಎಲ್ಲ ಭಾಗದ ಜನರು ನಾಟಕವನ್ನು ವೀಕ್ಷಿಸಬೇಕು. ನಾಟಕವನ್ನು ಎರಡು ದಿನಗಳ ಕಾಲ ಜಾತ್ರಾ ಮೈದಾನದಲ್ಲಿ ಹಾಗೂ ಒಂದು ದಿನ ಶರಣಬಸವೇಶ್ವರ್ ದೇವಸ್ಥಾನದ ಆವರಣದಲ್ಲಿ ಪ್ರದರ್ಶಿಸಲಾಗುವುದು ಎಂದರು.
ಉದ್ಘಾಟನೆಯನ್ನು ಮಾರ್ಚ್ 11ರಂದು ಡಾ. ಸಾರಂಘದರೇಶ್ವರ್ ಜಗದ್ಗುರುಗಳು ನೆರವೇರಿಸುವರು. ದಿವ್ಯ ಸಾನಿಧ್ಯವನ್ನು ಡಾ. ಶರಣಬಸಪ್ಪ ಅಪ್ಪಾ, ಮಾತೋಶ್ರೀ ದಾಕ್ಷಾಯಣಿ ಅಪ್ಪಾ, ರಾಜಶೇಖರ್ ಶಿವಾಚಾರ್ಯರು, ಚಿ. ದೊಡ್ಡಪ್ಪ ಅಪ್ಪಾ ಅವರು ವಹಿಸುವರು. ಅಧ್ಯಕ್ಷತೆಯನ್ನು ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಅವರು ವಹಿಸುವರು. ಬಸವರಾಜ್ ದೇಶಮುಖ್ ಅವರು ಉಪಸ್ಥಿತರಿರುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ರಮೇಶ್ ಕೋರಿಶೆಟ್ಟಿ, ಗುರಪ್ಪ ಪಾಟೀಲ್, ರಮೇಶ್ ಪಾಟೀಲ್, ಭೀಮಾಶಂಕರ್ ಬಿ. ಪಾಟೀಲ್, ವಿಶ್ವನಾಥ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.