ಮೂರು ದಿನಗಳ ಬಸವ ಜಯಂತಿ ಏ. 21 ರಂದು ಪ್ರಾರಂಭ

ಕಲಬುರಗಿ:ಏ.14: ನಗರದಲ್ಲಿ ಜಿಲ್ಲಾಡಳಿತದೊಂದಿಗೆ ಮೂರು ದಿನಗಳ ಕಾಲ ಬಸವ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಸವ ಜಯಂತ್ಯುತ್ಸವ ಸಮಿತಿಯ ಗೌರವಾಧ್ಯಕ್ಷ ವೀರಣ್ಣ ಹೊನ್ನಳ್ಳಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 21ರಿಂದ 23ರವರೆಗೆ ನಗರದ ಜಗತ್ ವೃತ್ತದಲ್ಲಿರುವ ಬಸವೇಶ್ವರ್ ಮೂರ್ತಿ ಆವರಣದಲ್ಲಿ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಮೂರು ದಿನಗಳ ಕಾಲ ಪ್ರತಿ ನಿತ್ಯ ಸಂಜೆ ವಚನ ಸಂಗೀತ, ವಿಶೇಷ ಉಪನ್ಯಾಸ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. ಏಪ್ರಿಲ್ 21ರಂದು ಸಂಜೆ 6-30ಕ್ಕೆ ಶಾಂತವೀರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಅಭಿನವ ಸಿದ್ದಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿವೆ. ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಅವರು ಹೇಳಿದರು.
ಏಪ್ರಿಲ್ 22ರಂದು ಸಂಜೆ 6-30ಕ್ಕೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮವನ್ನು ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಮೇಯರ್ ಡಾ. ಶರಣಕುಮಾರ್ ಮೋದಿ ಅವರು ಉದ್ಘಾಟಿಸುವರು. ಲೇಖಕ ಡಾ. ಎಸ್. ನಟರಾಜ್ ಅವರು ವಿಶೇಷ ಉಪನ್ಯಾಸ ನೀಡುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಮುಖರಿಗೆ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಏಪ್ರಿಲ್ 23ರಂದು ಬೆಳಿಗ್ಗೆ 8 ಗಂಟೆಗೆ ಷಟಸ್ಥಲ ಧ್ವಜಾರೋಹಣವನ್ನು ಡಾ. ಸಾರಂಗಧರ್ ದೇಶಿಕೇಂದ್ರ ಮಹಾಸ್ವಾಮಿಗಳು ನೆರವೇರಿಸುವರು. ವಿಶ್ವರಾಧ್ಯ ಸತ್ಯಂಪೇಟೆ ಅವರು ವಿಶೇಷ ಉಪನ್ಯಾಸ ನೀಡುವರು. ಅದೇ ರೀತಿ ಬೆಳಿಗ್ಗೆ 10 ಗಂಟೆಗೆ ಬಸವೇಶ್ವರ್ ಮೂರ್ತಿ ಆವರಣದಲ್ಲಿಯೇ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಂಜೆ 5 ಗಂಟೆಗೆ ವಿಶ್ವ ಗುರು ಬಸವಣ್ಣನವರ ಮತ್ತು ಕಾಯಕ ಶರಣರ ಭಾವಚಿತ್ರಗಳ ಸಾಂಸ್ಕøತಿಕ ಭವ್ಯ ಮೆರವಣಿಗೆ ಜರುಗಲಿದೆ. ಮೆರವಣಿಗೆಯು ನಗರೇಶ್ವರ್ ಶಾಲೆಯಿಂದ ಸೂಪರ್ ಮಾರ್ಕೆಟ್ ಮಾರ್ಗವಾಗಿ ಬಸವೇಶ್ವರ್ ಪುತ್ಥಳಿ ಆವರಣದವರೆಗೆ ಕಲಾಮೇಳಗಳೊಂದಿಗೆ ಜರುಗಲಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸೋಮಶೇಖರ್ ಹಿರೇಮಠ್, ಪ್ರಸಾದ್ ಪಟ್ಟಣಕರ್, ಕಲ್ಯಾಣಪ್ಪ ಪಾಟೀಲ್ ಮಳಖೇಡ್, ಶರಣು ಶಹಾಪುರ, ಜಗನ್ನಾಥ್ ಪಟ್ಟಣಶೆಟ್ಟಿ, ಡಾ. ಶ್ರೀಶೈಲ್ ಘೂಳಿ ಮುಂತಾದವರು ಉಪಸ್ಥಿತರಿದ್ದರು.