ಮೂರು ದಿನಗಳಿಂದ ನಡೆಯುತ್ತಿದ್ದ ಗಜಗಣತಿ ಅಂತ್ಯ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.25-ಕಳೆದ ಮೂರು ದಿನಗಳಿಂದ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಗಜಗಣತಿ ಶನಿವಾರ ಅಂತ್ಯಗೊಂಡಿದೆ. 3 ನೇ ದಿನವಾದ ಇಂದು ಜಲಮೂಲ ಬಳಿ ಬಂದ ಆನೆಗಳನ್ನು ಲೆಕ್ಕ ಹಾಕಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು 13 ವಲಯದ 113 ಬೀಟ್‍ಗಳು, ಕಾವೇರಿವನ್ಯ ಜೀವಿಧಾಮದ 43 ಬೀಟ್ ಗಳು, ಬಿಳಿಗಿರಿ ರಂಗನಾಥ ದೇವಾಲಯ ಹುಲಿಸಂರಕ್ಷಿತ ಪ್ರದೇಶದಲ್ಲಿ 170 ಮಂದಿ ಹಾಗೂ ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಗಣತಿ ಕಾರ್ಯ ನಡೆದಿದ್ದು, ಬೆಳಗ್ಗೆಯಿಂದ ಸಂಜೆ ತನಕ ಕೆರೆಗಳು, ಜಲ ಮೂಲಗಳ ಸಮೀಪ ಕುಳಿತು ಆನೆ ಲೆಕ್ಕಚಾರ ನಡೆಸಲಾಗಿದೆ.
ಮೊದಲ ದಿನ ಪ್ರತಿ ಬೀಟ್ ನಲ್ಲಿ 15 ಕಿ ಮೀ ನಡೆದು ಆನೆಗಳನ್ನು ಪ್ರತ್ಯಕ್ಷವಾಗಿ ಕಂಡು ದಾಖಲು ಮಾಡಿಕೊಂಡರೇ ಎರಡನೇ ದಿನ ಗಣತಿ ಕಾರ್ಯಕ್ಕೆ ನಿಯೋಜನೆ ಗೊಂಡ ಸಿಬ್ಬಂದಿ 2 ಕಿ ಮೀ ನಡೆದು ಲದ್ದಿ ನೋಡಿ ಆನೆ ಇರುವಿಕೆಯ ಬಗ್ಗೆ ತಿಳಿಯುವ ಕಾರ್ಯ ಕೈಗೊಂಡರು. ಇದು ಪರೋಕ್ಷವಾಗಿ ಆನೆ ಇರುವುದನ್ನು ಗುರುತಿಸುವದು ಆಗಿತ್ತು. ಇದರಿಂದ ಗಣತಿ ಪ್ರದೇಶದಲ್ಲಿ ಆನೆ ಇಲ್ಲದಿದ್ದರೂ ಅವುಗಳ ಇರುವಿಕೆಯನ್ನು ನಿಯೋಜನೆಗೊಂಡ ನೌಕರರು ನೋಡಿದ ಲದ್ದಿ ಬಗ್ಗೆ ಪುಸ್ತಕದಲ್ಲಿ ಸ್ಪಷ್ಟವಾಗಿ ದಾಖಲಿಸುವ ಮೂಲಕ ಖಚಿತ ಪಡಿಸಿಕೊಂಡಿದ್ದಾರೆ.
ಮೂರನೇ ದಿನವಾದ ಶನಿವಾರದಂದು ಕೆರೆ, ಕಟ್ಟೆಗಳು ಜಲಮೂಲಗಳ ಬಳಿ ಕಾದು ಕುಳಿತು ನೀರು ಕುಡಿಯಲು ಬರುವ ಆನೆಗಳನ್ನು ಲೆಕ್ಕ ಹಾಕಲಾಗಿದೆ. ಮೂರು ದಿನಗಳಲ್ಲಿ ಗುರುತಿಸಿದ ಆನೆಗಳ ಲೆಕ್ಕವನ್ನು ಕ್ರೋಢಿಕರಿಸಿದ ನಂತರ ವಿಶ್ಲೇಷಿಸಿ ಅರಣ್ಯ ಅಧಿಕಾರಿಗಳಿಂದ ಅಂತಿಮ ವರದಿ ಸಿದ್ಧ ಮಾಡಲಾಗುತ್ತಿದೆ.