ಮೂರು ದಶಕಗಳ ತಡಕಲ್ ರೈತರ ಮೇಲೆ ಹಲ್ಲೆ ಪ್ರಕರಣ – ಮಹತ್ವದ ತೀರ್ಪು

ತಪ್ಪಿತಸ್ಥರಾದ ಅಂದಿನ ತಹಶೀಲ್ದಾರ್, ಸಿಪಿಐಗೆ 3 ವರ್ಷ ಶಿಕ್ಷೆ
ರಾಯಚೂರು.ಏ.06- ರೈತರ ಮೇಲೆ ಲಾಠಿ ಪ್ರಹಾರ ಮತ್ತು ಠಾಣೆಗೆ ಕರೆದು ಅಮಾನುಷ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮಾನ್ವಿ ತಾಲೂಕಿನ ಅಂದಿನ ತಹಶೀಲ್ದಾರ್ ರಾಮಾಚಾರ ಅರ್ವಾಲಕರ್ ಮತ್ತು ಸಿಪಿಐ ಆಗಿದ್ದ ಕಾಶಿನಾಥ ಅವರಿಗೆ 2 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ, ಜೆಎಂಎಫ್‌ಸಿ 3ನೇ ನ್ಯಾಯಾಲಯದ ನ್ಯಾಯಾಧೀಶರಾದ ಅವಿನಾಶ ಗಾಳಿ ಅವರು ಮಹತ್ವದ ತೀರ್ಪು ನೀಡಿದ್ದಾರೆ.
27 ವರ್ಷಗಳ ನಂತರ ಈ ಪ್ರಕರಣ ಮತ್ತೇ ವಿಚಾರಣೆಗೆ ಬಂದು ಸಾಕ್ಷಾಧಾರಗಳನ್ನಾಧರಿಸಿ, ನ್ಯಾಯಾಲಯ ಈ ತೀರ್ಪು ನೀಡಿದೆ. ರೈತ ಸಂಘದ ಮುಖಂಡರಾದ ಹರವಿ ಶಂಕರಗೌಡ, ಬಸವನಗೌಡ ಮತ್ತು ತಡಕಲ್ ಮಲ್ಲಿಕಾರ್ಜುನ ಇವರ ಮೇಲೆ ಠಾಣೆಯಲ್ಲಿ ಹಲ್ಲೆ ಸೇರಿದಂತೆ ತಡಕಲ್ ಗ್ರಾಮದಲ್ಲಿ ರಾತ್ರಿ ರೈತರ ಮೇಲೆ ಲಾಠಿ ಪ್ರಹಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಶಂಕರಗೌಡ ಮತ್ತು ಸಂಗಡಿಗರು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಈ ದೂರಿನ ವಿರುದ್ಧ ಹೈಕೋರ್ಟ್‌ನಲ್ಲಿ ತಹಶೀಲ್ದಾರ್ ರಾಮಾಚಾರಿ ಮತ್ತು ಸಿಪಿಐ ಕಾಶಿನಾಥ ಅವರು ತಡೆಯಾಜ್ಞೆ ತಂದಿದ್ದರು.
ಇತ್ತೀಚಿಗಷ್ಟೆ ಈ ಪ್ರಕರಣ ಕುರಿತು ಮತ್ತೇ ವಿಚಾರಣೆ ಆರಂಭಗೊಂಡು ಕೊನೆಗೂ ಅಂದಿನ ತಹಶೀಲ್ದಾರ್ ಮತ್ತು ಕಾಶಿನಾಥ ಅವರಿಗೆ 3 ವರ್ಷದ ಶಿಕ್ಷೆ ವಿಧಿಸಿ, ತೀರ್ಪು ನೀಡಲಾಗಿದೆ.
@12bc = ಘಟನೆಯ ಸಂಪೂರ್ಣ ವಿವಿರ ಈ ಕೆಳಗಿನಂತಿದೆ.
1994 ರಲ್ಲಿ ಮಾನ್ವಿ ತಾಲೂಕಿನ ತಡಕಲ್ ಗ್ರಾಮದಲ್ಲಿ ಆರ್‌ಡಿಸಿಸಿ ಬ್ಯಾಂಕ್‌ನಿಂದ ರೈತರ ಮನೆ ಜಪ್ತಿಗೆ ಆಗಮಿಸಲಾಗಿತ್ತು. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಅಂದಿನ ರಾಜ್ಯ ರೈತ ಸಂಘದ ಮುಖಂಡರಾದ ಹರವಿ ಶಂಕರಗೌಡ, ನಾಗರಾಜ ಇವರು ಸೇರಿದಂತೆ ರೈತರು ಜಪ್ತಿ ತಡೆಯುವಂತೆ ಪ್ರತಿಭಟನೆ ನಡೆಸಿದರು. ಇಡೀ ದಿನ ಈ ಪ್ರತಿಭಟನೆ ಮುಂದುವರೆಸಲಾಯಿತು. ಸಂಜೆ ವೇಳೆಯಲ್ಲಿ ಗ್ರಾಮದಲ್ಲಿ ವಿದ್ಯುತ್ ಕಡಿತ ಮಾಡಿ, ಪೊಲೀಸರೇ ಕಲ್ಲು ತೂರಿ, ನಂತರ ಲಾಠಿ ಪ್ರಹಾರ ನಡೆಸಿದರು. ಲಾಠಿ ಪ್ರಹಾರ ಘಟನೆಯಿಂದ ರೈತರು ಅಲ್ಲಿಂದ ಚದುರಿದ್ದರು.
ನಂತರ ಹರವಿ ಶಂಕರಗೌಡ, ಬಸವನಗೌಡ ಮತ್ತು ತಡಕಲ್ ಮಲ್ಲಿಕಾರ್ಜುನ ಅವರನ್ನು ಠಾಣೆಗೆ ಕರೆತಂದು ಪೊಲೀಸರು ಮನ್ಸೋ ಇಚ್ಛೆ ಹಲ್ಲೆ ಮಾಡ್ಡಿದ್ದರು. ಈ ಹಲ್ಲೆಯ ಸಂದರ್ಭದಲ್ಲಿ ಬಸವನಗೌಡ ಅವರ ಕೈ ಮೂಳೆ ಮುರಿದು, ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದರು. ಹರವಿ ಶಂಕರಗೌಡ ಅವರಿಗೆ ಬೆತ್ತಗಳಿಂದ ಹೊಡೆಯಲಾಗಿತ್ತು. ಈ ಕುರಿತು ಶಂಕರಗೌಡ ಅವರನ್ನು ವಿಚಾರಿಸಿದಾಗ 40 ಬೆತ್ತ ಮುರಿಯುವ ರೀತಿಯಲ್ಲಿ ಹಲ್ಲೆ ಮಾಡಲಾಗಿತ್ತು. ಅಲ್ಲದೇ, ತಲೆಗೆ ಗನ್ ಇಟ್ಟು ಜೀವ ಬೆದರಿಕೆಯೂ ಹಾಕಲಾಗಿತ್ತು.
ಈ ಘಟನೆಗೆ ಸಂಬಂಧಿಸಿ ಖಾಸಗಿ ಪ್ರಕರಣವೊಂದನ್ನು ದಾಖಲಿಸಿ, ತಮ್ಮ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆ ನೀಡುವಂತೆ ಕೋರಲಾಯಿತು. ತಹಶೀಲ್ದಾರ್ ಮತ್ತು ಸಿಪಿಐ ತಡೆಯಾಜ್ಞೆ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಸ್ಥಗಿತಗೊಂಡಿತು. ಇತ್ತೀಚಿಗೆ ನಾಲ್ಕೈದು ತಿಂಗಳಗಳ ಹಿಂದೆ ಮತ್ತೇ ಈ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡ ಜೆಎಂಎಫ್‌ಸಿ ನ್ಯಾಯಾಲಯ ಘಟನೆಗೆ ಸಂಬಂಧಿಸಿ ವಿಚಾರಣೆ ನಡೆಸಿತು. ವಾದ, ಪ್ರತಿವಾದಗಳ ನಂತರ ನ್ಯಾಯಮೂರ್ತಿ ಅವಿನಾಶ ಗಾಳಿ ಅವರು, ಅಂದಿನ ತಹಶೀಲ್ದಾರಾಗಿದ್ದ ರಾಮಾಚಾರಿ ಅರ್ವಾಲಕರ್ ಮತ್ತು ಸಿಪಿಐ ಕಾಶಿನಾಥ ಅವರಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿ, ತೀರ್ಪು ನೀಡಿದ್ದಾರೆ.