ಮೂರು ಗ್ರಾಮಗಳ ರೈತರಿಗೆ ಭಾರೀ ಬೆಳೆ ನಷ್ಟ

ಅಧಿಕಾರಿಗಳ ನಿರ್ಲಕ್ಷ್ಯ : ಅಪೂರ್ಣ ಕಾಲುವೆಗೆ ಅನಗತ್ಯ ನೀರು
ರಾಯಚೂರು.ಅ.31- ಅನಗತ್ಯವಾಗಿ ಅಪೂರ್ಣಗೊಂಡ ನಾರಾಯಣಪೂರ ಬಲದಂಡೆ ಕಾಲುವೆಗೆ ನೀರು ಹರಿಸುವ ಮೂಲಕ ಅಸ್ಕಿಹಾಳ, ರಾಂಪೂರು ಹಾಗೂ ಹುಣಸಿಹಾಳ ಗ್ರಾಮಗಳ ಸೀಮಾಂತರದ ರೈತರಿಗೆ ಭಾರೀ ನಷ್ಟಕ್ಕೆ ನೀರಾವರಿ ಅಧಿಕಾರಿಗಳು ಕಾರಣವಾಗಿದ್ದಾರೆ.
ನಿನ್ನೆಯಿಂದ ಕಳೆದ ಎರಡು ದಿನಗಳ ಕಾಲ ಕಾಲುವೆಯಲ್ಲಿ ನೀರು ಹರಿದ ಕಾರಣಕ್ಕೆ ಈ ಮೂರು ಗ್ರಾಮಗಳ ಸೀಮಾಂತರದಲ್ಲಿ ಸುಮಾರು 60 ಎಕರೆ ಜಮೀನು ಬೆಳೆ ನಷ್ಟಕ್ಕೆ ದಾರಿ ಮಾಡಿದೆ. ಅತಿವೃಷ್ಟಿ- ಅನಾವೃಷ್ಟಿಯಿಂದ ಒಂದೆಡೆ ರೈತರು ತೀವ್ರ ತೊಂದರೆಗೊಳಗಾಗಿದ್ದರೇ, ಮತ್ತೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯೆ ಈಗ ರೈತರು ಕೈಗೆ ಬಂದ ಬೆಳೆ ಕಳೆದುಕೊಳ್ಳುವಂತಾಗಿದೆ.
ಅನಗತ್ಯವಾಗಿ ಅಪೂರ್ಣಗೊಂಡ ಕಾಲುವೆಗೆ ನೀರು ಹರಿಸಿದ್ದರಿಂದ ಅಸ್ಕಿಹಾಳ, ರಾಂಪೂರು ಹಾಗೂ ಹುಣಸಿಹಾಳಹುಡಾ ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು, ಬೆಳೆ ಹಾನಿಯಾಗಿದ್ದು, ಗಾಯದ ಮೇಲೆ ಎಳೆದಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾರಾಯಣಪುರ ಬಲದಂಡೆ ನಾಲೆಯಿಂದ ಕಾಲುವೆಗೆ ನೀರು ಬಿಟ್ಟಿದ್ದು, ಏಕಾಎಕಿ ರೈತರ ಜಮೀನುಗಳಿಗೆ ಹರಿದ ಪರಿಣಾಮ ಬೆಳೆದ ಬೆಳೆ ಹಾನಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗಾಗಿದೆ.
ಕೊರೋನಾ ಮಹಾಮಾರಿಯಿಂದ ಬೆರೇಡೆ ಕೆಲಸವೂ ಇಲ್ಲ. ಇದ್ದ ಜಮೀನಿನಲ್ಲಿ ಕಷ್ಟ ಪಟ್ಟು ಬೆಳೆದ ಬೆಳೆ ನೀರು ಪಾಲಾಗಿದ್ದು, ರೈತರ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ.
ಸಾಲ ಮಾಡಿ ಬೀಜ, ಗೊಬ್ಬರ ಹಾಕಿ ಬೆಳೆದ ಬೆಳೆ ಇನ್ನೇನು ಕೈಗೆ ಬರುವದೆಂಬಷ್ಟರಲ್ಲಿ ಹಾಳಾಗಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ.
ಇಲ್ಲಿಯವರೆಗೂ ಮಳೆಯಿಂದ ತತ್ತರಿಸಿದ್ದ ರೈತರು, ಈಗ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ನಾಲೆಗೆ ವ್ಯರ್ಥವಾಗಿ ನೀರು ಹರಿಸಿದ್ದರಿಂದ ನೂರಾರು ಎಕರೆ ಭೂಮಿಯಲ್ಲಿ ಭತ್ತ, ತೊಗರಿ ಬೆಳೆ ಹಾಳಾಗಿದೆ. ಹಾಳಾದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಅಪೂರ್ಣವಾಗಿರುವ ಕಾಲುವೆ ಕೂಡಲೇ ಪೂರ್ಣಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.