ಮೂರು‌ ದಿನ ಪ್ರವಾಸಿಗರಿಗೆ ನಂದಿಬೆಟ್ಟ ಬಂದ್

ಚಿಕ್ಕಬಳ್ಳಾಪುರ, ಡಿ 26- ಎರಡನೇ ಹಂತದ ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ನಂದಿ ಗಿರಿಧಾಮವನ್ನು ಮೂರು ದಿನಗಳ ಕಾಲ ಬಂದ್ ಮಾಡಿ ಜಿಲ್ಲಾಧಿಕಾರಿ ಆರ್ .ಲತಾ ಆದೇಶ ಹೊರಡಿಸಿದ್ದಾರೆ.
ಡಿ 30ರಿಂದ ಬೆಳಗ್ಗೆ ಆರು ಗಂಟೆಯಿಂದ ಜನವರಿ 2 ರ ಬೆಳಿಗ್ಗೆ ಆರು ಗಂಟೆಯವರೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ.
ನೂತನ ವರ್ಷಾಚರಣೆಗೆ ತಡೆ ಹಾಗೂ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜನರು ಗುಂಪಾಗಿ ಸೇರುವುದನ್ನು ನಿರ್ಬಂಧಿಸಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಂದಿ ಗಿರಿಧಾಮದಲ್ಲಿ ಪ್ರವಾಸಿಗರ ದಟ್ಟಣೆ, ಮೋಜು ಮಸ್ತಿ ಮಾಡುವುದರಿಂದ ಕೊರೊನಾ ಹರಡುವ ಆತಂಕವಿದೆ.ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.
ಪ್ರತಿ ವರ್ಷ ಡಿ 31ರ. ಸಂಜೆ 5 ಗಂಟೆಯ ಬಳಿಕ ನಂದಿಬೆಟ್ಟಕ್ಕೆ ಪ್ರವೇಶ ಬಂದ್ ಮಾಡಿ ಜ. 1ರ ಬೆಳಗ್ಗೆ 8 ಗಂಟೆಯ ನಂತರ ಪ್ರವಾಸಿಗರಿಗೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಮೂರು ದಿನಗಳ ಕಾಲ ನಂದಿಬೆಟ್ಟ ಬಂದ್ ಮಾಡಲಾಗಿದೆ.