ಮೂರುದಿನ ಅನುಮತಿ ಮುಕ್ತಾಯ : ರಸ್ತೆಗಳು ಬಣಬಣ

ಹುಬ್ಬಳ್ಳಿ, ಮೇ 30: ಧಾರವಾಡ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಮಧ್ಯೆ ದಿನಸಿ ಹಾಗೂ ಮಾಂಸ ಖರೀದಿಗೆ ನೀಡಿದ ಅನುಮತಿ ನಿನ್ನೆಗೆ ಮುಕ್ತಾಯವಾಗಿದ್ದು, ಇಂದು ಬೆಳಿಗ್ಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ರಸ್ತೆಗಳು ಬಣಗುಟ್ಟುತ್ತಿರುವ ದೃಶ್ಯಗಳು ಕಂಡುಬಂದವು.
ಧಾರವಾಡ ಜಿಲ್ಲೆಯಾದ್ಯಂತ ಮೇ 27, 28 ಹಾಗೂ 29 ರಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾರ್ವಜನಿಕರಿಗೆ ದಿನಸಿ ಹಾಗೂ ಮಾಂಸ ಖರೀದಿಗೆ ಕಾಲಾವಕಾಶ ವಿಸ್ತರಿಸಿ ಅನುಮತಿ ನೀಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಈ ಮೂರು ದಿನಗಳ ಕಾಲಾವಕಾಶದಲ್ಲಿ ಮಹಾನಗರದ ಜನತೆ ದಿನಸಿ ಖರೀದಿಯಲ್ಲಿ ತೊಡಗಿದ್ದು, ಮಾರುಕಟ್ಟೆ ಪ್ರದೇಶದಲ್ಲಿ ಜನಜಂಗುಳಿಯಿಂದ ಕೂಡಿತ್ತು.
ಇಂದು ಜಿಲ್ಲೆಯಾದ್ಯಂತ ಎಂದಿನಂತೆ ಸಂಪೂರ್ಣ ಲಾಕ್‍ಡೌನ್ ನಿಯಮಗಳೇ ಜಾರಿಯಲ್ಲಿದ್ದು, ರಸ್ತೆಗಳೆಲ್ಲವೂ ನಿರ್ಜನವಾಗಿ ಬಿಕೋ ಎನ್ನುತ್ತಿವೆ.
ನಗರದ ದುರ್ಗದ ಬೈಲ್, ಜನತಾ ಬಜಾರ್, ಹಳೇ-ಹುಬ್ಬಳ್ಳಿ, ಶಿರೂರ ಪಾರ್ಕ್, ಕೇಶ್ವಾಪೂರ ಹಾಗೂ ಧಾರವಾಡದ ಸುಭಾಸ್ ರಸ್ತೆ, ಅಕ್ಕಿ ಪೇಟೆ ಮತ್ತಿತರ ಪ್ರದೇಶಗಳಲ್ಲಿ ಸಂಪೂರ್ಣ ನಿಶ್ಯಬ್ದ ಆವರಿಸಿತ್ತು.
ಮೂರು ದಿನಗಳ ಕಾಲ ಮಾರುಕಟ್ಟೆ ಪ್ರದೇಶದಲ್ಲಿ ದಿನಸಿ ಮಾರಾಟಕ್ಕೆ ತೆರೆದಿದ್ದ ಅಂಗಡಿಯ ಬಾಗಿಲುಗಳೆಲ್ಲವೂ ಇಂದು ಮುಚ್ಚಿ ಬಣಗುಟ್ಟುತ್ತಿದೆ. ಎಂದಿನಂತೆ ಬೆಳಿಗ್ಗೆ 6 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಮಾತ್ರ ತರಕಾರಿ, ಹಾಲು ಖರೀದಿಗೆ ಜನರು ಹೊರ ಬಂದು ಖರೀದಿಯಲ್ಲಿ ತೊಡಗಿದ್ದು, ಕಂಡುಬಂತು.
ಬೆಳಿಗ್ಗೆ 8 ಗಂಟೆಯ ನಂತರ ಹೊರಬಂದವರನ್ನು ಪೊಲೀಸರು ವಿಚಾರಿಸಿ ಬಿಡುತ್ತಿರುವ ದೃಶ್ಯಗಳು ಕಂಡುಬದವು. ಪ್ರತಿಯೊಂದು ರಸ್ತೆಗಳಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಿದ್ದು, ವಾಹನ ತಪಾಸಣೆ ಕಾರ್ಯ ಬಿಗಿಯಾಗಿತ್ತು.