ಮೂರಾಬಟ್ಟೆಯಾದ ಕೂಲಿ ಕಾರ್ಮಿಕರ ಬದುಕು

ಗಬ್ಬೂರ.ಮೇ.೩೧-ಕೊರೋನಾ ಲಾಕ್‌ಡೌನ್ ನಿಂದಾಗಿ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿರುವ ಕೂಲಿ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ. ಒಂದು ತಿಂಗಳಿನಿಂದ ಕೆಲಸವಿಲ್ಲದೆ ಕಾರ್ಮಿಕರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರೋ ಘಟನೆ ದೇವದುರ್ಗ ತಾಲೂಕಿನ ಶಾವಂತಗೇರಾ ಗ್ರಾಪಂ ವ್ಯಾಪ್ತಿಗೆ ಬರುವ ಹಂಚಿನಾಳ ಗ್ರಾಮದಲ್ಲಿ ನಡೆದಿದೆ.
ಇವರೆಲ್ಲ ಕೂಲಿ ಕೆಲಸವನ್ನು ನಂಬಿ ಬದುಕು ಸಾಗಿಸುತ್ತಿರೋ ಜನರು. ಕೊರೋನಾ ಎಫೆಕ್ಟ್ ನಿಂದ ಲಾಕ್ ಡೌನ್ ಪರಿಣಾಮ ಕೂಲಿ ನಾಲಿ ಮಾಡಿ ಬದುಕುತ್ತಿದ್ದು ದುಡಿಯುವ ಕೈಗಳಿಗೆ ಇದೀಗ ಕೆಲಸವೇ ಸಿಗದಂತಹ ದುಃಸ್ಥತಿ ಎದುರಾಗಿದೆ. ಇದರಿಂದ ಮಕ್ಕಳು, ವೃದ್ಧರು ದೊಡ್ಡವರು ಸಹ ಹಸಿವಿನಿಂದ ಬಳಲುವಂತಾಗಿದೆ. ಯುವಕರು, ಗಂಡಸರು, ಹೆಂಗಸರು ಎಲ್ಲರೂ ಕೆಲಸಕ್ಕೆ ಹೋಗುತ್ತಿದ್ದರು, ಆದರೆ ಇದೀಗ ಕೂಲಿ ಇಲ್ಲದೇ ಮನೆಯಲ್ಲೆ ಇರುವ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ಒಪ್ಪೊತ್ತಿನ ಊಟಕ್ಕೂ ಈ ಬಡ ಕೂಲಿ ಕಾರ್ಮಿಕರು ಪರದಾಟ ನಡೆಸುವಂತಾಗಿದೆ.
ಹತ್ತಿ ಹೊಲವನ್ನೆ ನಂಬಿ ಜೀವನ ಸಾಗಿಸುತ್ತಿದ್ದ ಕಾರ್ಮಿಕರು ಕೆಲಸವೂ ಇಲ್ಲ, ಇತ್ತ ನೆಮ್ಮದಿಯೂ ಇಲ್ಲ ಎಂದು ಕಣ್ಣೀರಿಡುತ್ತಾ ಬದುಕು ದೂಡುತ್ತಿದ್ದಾರೆ. ಇನ್ನೂ ದೇವದುರ್ಗ ತಾಲೂಕಿನ ಬಹುತೇಕ ಹಳ್ಳಿಯ ಬಡ ಕೂಲಿ ಕಾರ್ಮಿಕರು ಒಪ್ಪೊತ್ತಿನ ಊಟಕ್ಕೂ ಕಣ್ಣೀರು ಹಾಕುವಂತಾಗಿದೆ. ಆದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ತಲೆ ಎತ್ತಿ ನೋಡಿಲ್ಲ ಎಂದು ಮಾನಿಶಮ್ಮ, ನಾಗಮ್ಮ, ಸಿದ್ದಮ್ಮ, ಶಿವಮ್ಮ, ಮಾರೇಮ್ಮ, ಲಕ್ಷ್ಮೀ ನೊಂದ ಮಹಿಳೆಯರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.