ಮೂರನೇ ಮಗುವನ್ನು ಪರಿಚಯಿಸಿದ ಎಬಿ ಡಿವಿಲಿಯರ್ಸ್-ಡೇನಿಯಲ್‌ ದಂಪತಿ


ನವದೆಹಲಿ, ನ 20 -ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಮುಗಿಸಿಕೊಂಡು ಸ್ವದೇಶಕ್ಕೆ ತೆರಳಿದ ಬಳಿಕ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್ ಹಾಗೂ ಅವರ ಪತ್ನಿ ಡೇನಿಯಲ್‌ ಮೂರನೇ ಮಗು(ಹೆಣ್ಣು)ವಿಗೆ ಸ್ವಾಗತವನ್ನು ಕೋರಿದರು. ಇದಕ್ಕೂ ಮುನ್ನ ಎಬಿಡಿ ಇಬ್ಬರು ಅಬ್ರಹಾಂ ಡಿ ವಿಲಿಯರ್ಸ್ ಹಾಗೂ ಜಾನ್‌ ರಿಚರ್ಡ್‌ ಡಿ ವಿಲಿಯರ್ಸ್ ಇಬ್ಬರು ಗಂಡು ಮಕ್ಕಳಿಗೆ ತಂದೆಯಾಗಿದ್ದರು.

ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ದಶಲಕ್ಷಕ್ಕಿಂತಲೂ ಅಧಿಕ ಫಾಲೋವರ್ಸ್‌ಗೆ ತಮಗೆ ಮೂರನೇ ಮಗುವಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಪತ್ನಿ ಹಾಗೂ ಹೊಸದಾಗಿ ಜನಿಸಿರುವ ಮಗಳಿನೊಂದಿಗಿನ ಫೋಟೊವನ್ನು ಎಬಿ ಡಿವಿಲಿಯರ್ಸ್ ಪೋಸ್ಟ್‌ ಮಾಡಿದ್ದಾರೆ. ಮಗಳಿಗೆ ಇಟ್ಟಿರುವ ‘ಯೆಂಟೆ ಡಿ ಡಿವಿಲಿಯರ್ಸ್’ ಎಂಬ ಹೆಸರನ್ನು ಅವರು ಬಹಿರಂಗ ಪಡಿಸಿದರು.

“11-11-2020 ರಂದು ನಾವು ಮೂರನೇ ಮಗುವನ್ನು ಪ್ರಪಂಚಕ್ಕೆ ಸ್ವಾಗತಿಸಿದ್ದೆವು” ಎಂಬ ಶೀರ್ಷಿಕೆಯನ್ನು ನೀಡಿರುವ ಡಿವಿಲಿಯರ್ಸ್, “ಯೆಂಟೆ ಡಿವಿಲಿಯರ್ಸ್, ನೀವು ನಮ್ಮ ಕುಟುಂಬಕ್ಕೆ ಪರಿಪೂರ್ಣ ಸೇರ್ಪಡೆ ಮತ್ತು ಆಶೀರ್ವಾದ. ನಿಮಗಾಗಿ ಲೆಕ್ಕಕ್ಕಿಂತ ಮೀರಿ ನಾವು ಕೃತಜ್ಞರಾಗಿರುತ್ತೇವೆ! ” ಎಂದು ಎರಡನೇ ಸಾಲಿನಲ್ಲಿ ತನ್ನ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಎಬಿ ಡಿವಿಲಿಯರ್ಸ್ ಇತ್ತೀಚಿಗೆ ಮುಕ್ತಾಯವಾಗಿದ್ದ ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಪರ ಆಡಿದ್ದರು. ನಿರೀಕ್ಷೆಯೆಂತೆ ಆರ್‌ಸಿಬಿ ಪರ ಡಿವಿಲಿಯರ್ಸ್ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಆದರೆ, ತಂಡದ ಒಟ್ಟಾರೆ ವೈಫಲ್ಯದಿಂದ 2020ರ ಐಪಿಎಲ್‌ನಲ್ಲಿ ಆರ್‌ಸಿಬಿ ಎಲಿಮಿನೇಟರ್‌ ಪಂದ್ಯದಲ್ಲಿ ಸೋಲು ಅನುಭವಿಸಿತ್ತು.

15 ಪಂದ್ಯಗಳಾಡಿದ್ದ ಎಬಿಡಿ ಐದು ಅರ್ಧಶತಕಗಳೊಂದಿಗೆ 454 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ ಆರ್‌ಸಿಬಿ ಪರ ಮೂರನೇ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದರು. 2016ರ ಬಳಿಕ ಮೊದಲ ಬಾರಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿದ್ದ ಆರ್‌ಸಿಬಿ, ಎಲಿಮಿನೇಟರ್‌ ಹಣಾಹಣಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಸೋಲು ಅನುಭವಿಸಿತ್ತು.

ಎಬಿ ಡಿವಿಯರ್ಸ್ ಅವರ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಆಟಗಾರ ಹಾಗೂ ಆತ್ಮೀಯ ಸ್ನೇಹಿತ ವಿರಾಟ್‌ ಕೊಹ್ಲಿ ಕೂಡ ಜನವರಿಯಲ್ಲಿ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.