ಮೂರನೇ ಅಲೆ ಎದುರಿಸಲು ಸಿದ್ದತೆ: ಡಿಸಿಎಂ

ಬೆಂಗಳೂರು.ಜೂ.10- ರಾಜ್ಯದಲ್ಲಿ ಎದುರಾಗಬಹುದಾದ ಕೋರೋನಾ ಸೋಂಕಿನ ಮೂರನೇ ಅಲೆ ಎದುರಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆಯ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ ಹೇಳಿದ್ದಾರೆ.

ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಿಗೆ ಆಮ್ಲಜನಕ ಸಾಂದ್ರಕ ಪೂರೈಕೆ ಮಾಡುವುದು ಸೇರಿದಂತೆ ಇನ್ನಿತರೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ

ಕೋವಿಡ್ ಸೋಂಕಿತರಿಗೆ ತಂತ್ರಜ್ಞಾನದ ನೆರವಿನಿಂದ ಅತ್ಯುತ್ತಮ ಚಿಕಿತ್ಸೆ ನೀಡಲು 200 ಆಮ್ಲಜನಕ ಸಾಂದ್ರಕಗಳೂ ಸೇರಿದಂತೆ ‌2.5 ಕೋಟಿ ರೂ. ಮೊತ್ತದ ವಿವಿಧ ಅತ್ಯಾಧುನಿಕ ವೈದ್ಯಕೀಯ ಸಾಮಗ್ರಿಗಳನ್ನು ಕೆಲ ಕಂಪನಿಗಳು ಸಿ-ಕ್ಯಾಂಪ್‌ ಮೂಲಕ ಸರಕಾರಕ್ಕೆ ಕೊಡುಗೆಯಾಗಿ ನೀಡಿವೆ ಎಂದರು

200 ಆಮ್ಲಜನಕ ಸಾಂದ್ರಕಗಳನ್ನು ನೀಡಿದ್ದು, ಇವುಗಳನ್ನು ತಲಾ ಐದರಂತೆ 40 ವಿಧಾನಸಭೆ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗುವುದು ಎಂದರು.

ಸೋಂಕಿತ ವ್ಯಕ್ತಿ ಎಲ್ಲೇ ಇದ್ದರೂ ಇದರ ಮೂಲಕವೇ ಆಕ್ಸಿಜನ್‌, ಪಲ್ಸ್‌ ರೇಟ್, ಬಿಪಿ ಮಟ್ಟವನ್ನು ಪರಿಶೀಲನೆ ಮಾಡಿ ಚಿಕಿತ್ಸೆ ನೀಡಬಹುದು. ಸಿಬ್ಬಂದಿ ಇಲ್ಲದಿದ್ದರೂ ಈ ಯಂತ್ರ ಕರಾರುವಕ್ಕಾದ ಮಾಹಿತಿ ನೀಡುತ್ತದೆ ಎಂದರು.

ಸಿ-ಕ್ಯಾಂಪ್‌ ಸಂಸ್ಥೆಯು ವ್ಯಾಕ್ಸಿನ್‌ ಅನ್ನು ಯಾವುದೇ ಮಟ್ಟದ ಉಷ್ಣಾಂಷದಲ್ಲೂ ಸಾಗಣೆ ಮಾಡುವಂಥ ಒಂದು ಕಿಟ್‌ ಅನ್ನು ತಯಾರು ಮಾಡಿದೆ. ಅದನ್ನು ಬಳಕೆ ಮಾಡಲು ಮುಂದೆ ಬಂದಿದ್ದು, ಲಸಿಕೆ ಅಭಿಯಾನದಲ್ಲಿ ಈ ಕಿಟ್‌ ಅನ್ನು ಬಳಸಿಕೊಳ್ಳಲಾಗುವುದು ಎಂದರು

ರಾಯಚೂರು ಶಾಸಕ ಡಾ.ಶಿವರಾಜ್‌ ಪಾಟೀಲ್‌, ಬಸವಕಲ್ಯಾಣ ಶಾಸಕ ಶರಣು ಸಲಗಾರ್ ಅವರು ಡಿಸಿಎಂ ಅವರಿಂದ ತಲಾ ಐದು ಆಮ್ಲಜನಕ ಸಾಂದ್ರಕಗಳನ್ನು ಸ್ವೀಕರಿಸಿದರು.