ಮೂರನೆಯ ಅಲೆಯ ಸಿದ್ಧತೆ ಹಕ್ಕೊತ್ತಾಯಕ್ಕಾಗಿ ಸಿಎಂಗೆ ಮನವಿ ಸಲ್ಲಿಸಿದ ದಸಂಸ

ಮೈಸೂರು,ಮೇ.31:- ಸರ್ಕಾರ ಮುಂಬರುವ ಕೊರೋನಾ ಮೂರನೇ ಅಲೆಯನ್ನು ಎದುರಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡು ಮುಂದಿನ ತಲೆಮಾರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆದ್ಯತೆ ಮೇರೆಗೆ ಕೆಲಸ ಮಾಡಬೇಕು.
ದಿನನಿತ್ಯ ಬವಣೆ ಪಡುತ್ತಿರುವ ಎಲ್ಲಾ ಬಡಜನರಿಗೆ ಮತ್ತೊಮ್ಮೆ ಆರ್ಥಿಕ ಪ್ಯಾಕೇಜ್ ಘೋಷಿಸುವ ಮೂಲಕ ತನ್ನ ಮೇಲಿನ ಆಪಾದನೆಯ ಕಲೆಗಳನ್ನು ತೊಳೆದುಕೊಳ್ಳಲಿ ಎಂದಿರುವ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ. ಮನವಿಯಲ್ಲಿ ಕೆಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದೆ.
ದಸಂಸ ಜಿಲ್ಲಾ ಸಂಚಾಲಕರುಗಳಾದ ಆಲಗೂಡು ಶಿವಕುಮಾರ್ ಮಾತನಾಡಿ ದಲಿತ ಯುವಕ ಪುನೀತ್ ಜೊತೆ ಗೋಣೀಬೀಡಿನ ಪಿಎಸ್ ಐ ಅರ್ಜುನ್ ನಡೆದುಕೊಂಡಿರುವ ರೀತಿ ಅಮಾನವೀಯವಾಗಿದ್ದು, ಅವರನ್ನು ಸೇವೆಯಿಂದ ವಜಾ ಮಾಡಬೇಕು.
ವಿಜಯಪುರದ ಬಸವನ ಬಾಗೇವಾಡಿಯ ಇಬ್ಬರು ಅಪ್ರಾಪ್ತ ದಲಿತ ಬಾಲಕಿಯರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿ ಉಗ್ರ ಶಿಕ್ಷೆ ನೀಡಬೇಕು. ಚಾಮರಾಜನಗರದಲ್ಲಿ ಕೊರೋನಾ ಪೀಡಿತರ ಸಾವಿಗೆ ಆಮ್ಲಜನಕದ ಕೊರತೆಯೇ ಕಾರಣವೆಂದು ಹೈಕೋರ್ಟ್ ನೇಮಿಸಿದ್ದ ತನಿಖಾ ಸಮಿತಿಯು ವರದಿ ನೀಡಿರುವುದರಿಂದ ಆರೋಗ್ಯ ಸಚಿವ ಸುಧಾಕರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.
ಚಾಮರಾಜನಗರವನ್ನೂ ಒಳಗೊಂಡಂತೆ ರಾಜ್ಯಾದ್ಯಂತ ಆಮ್ಲಜನಕ ಕೊರತೆಯಿಂದಾಗಿ ಸಾವನ್ನಪ್ಪಿರುವ ಬಡ ಕುಟುಂಬಗಳಿಗೆ ತಲಾ ಹತ್ತು ಲಕ್ಷ ಪರಿಹಾರ ಧನ ನೀಡಬೇಕು. ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಪ.ಜಾತಿ.ಪ.ವರ್ಗದ ಬಡವರಿಗೆ ಎಸ್ ಸಿ ಪಿ/ಟಿ.ಎಸ್.ಪಿ ಅನುದಾನದಿಂದ ಹಾಗೂ ಎಲ್ಲಾ ಸಮುದಾಯದ ದುಡಿಯುವ ಬಡಜನರ ಪ್ರತಿ ಕುಟುಂಬಗಳಿಗೂ ಸರ್ಕಾರ ಮಾಸಿಕ ಕನಿಷ್ಠ 15ಸಾವಿರ ರೂ.ಆರ್ಥಿಕ ನೆರವು ನೀಡಬೇಕು.
ಎಸ್ ಸಿ ಪಿ/ಟಿ.ಎಸ್.ಪಿ ಹಣದ ದುರ್ಬಳಕೆ ಅವ್ಯವಹಾರ ಹಾಗೂ ಸದ್ಬಳಕೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕೊರೋನಾ ಮತ್ತು ಫಂಗಸ್ ಗೆ ಒಳಗಾಗಿರುವ ಎಲ್ಲರಿಗೂ ಉಚಿತವಾಗಿ ಲಸಿಕೆ, ಔಷಧೋಪಚಾರ, ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ವ್ಯವಸ್ಥೆಯನ್ನು ಕಲ್ಪಿಸಬೇಕು.
ಈ ಸಂದರ್ಭ ಶಂಭುಲಿಂಗಸ್ವಾಮಿ, ರಾಜಶೇಖರ್ ಕೋಟೆ, ಕಾರ್ಯ ಬಸವಣ್ಣ, ಕಲ್ಲಹಳ್ಳಿ ಕುಮಾರ್, ಸುನೀತಾ ಇದ್ದರು.