ಮೂತ್ರ ಸಂಬಂಧ ರೋಗಕ್ಕೆ ಮನೆಮದ್ದು

೧. ಕಟ್ಟುಮೂತ್ರ ನಿವಾರಣೆಗೆ: ಶುದ್ಧ ಅರಿಶಿನಪುಡಿಯನ್ನು ಕಾಯಿಸಿದ ಹಸುವಿನ ಹಾಲಿಗೆ ಹಾಕಿ ಕುಡಿಯುವುದರಿಂದ ಕಟ್ಟುಮೂತ್ರ ನಿವಾರಣೆಯಾಗುತ್ತದೆ.
೨. ರಾತ್ರಿ ಹಾಸಿಗೆಯಲ್ಲಿ ಮೂತ್ರವಿಸರ್ಜನೆ ಮಾಡುವ ಮಕ್ಕಳಿಗೆ ಜೇನುತುಪ್ಪದಲ್ಲಿ ಅರಿಶಿನದ ಕೊಂಬನ್ನು ತೇಯ್ದು ಮಲಗುವ ೧ ಗಂಟೆ ಮುಂಚೆ ನೆಕ್ಕಿಸಿದರೆ ರಾತ್ರಿ ಮೂತ್ರ ವಿಸರ್ಜನೆ ಮಾಡುವುದು ಕಡಿಮೆ ಆಗುತ್ತದೆ.
೩. ಮೂತ್ರ ಸಂಬಂಧ ರೋಗಗಳಿಗೆ ಅರಿಶಿನ ಹಾಗೂ ಕಾಳುಮೆಣಸಿನಪುಡಿ ಸಮಭಾಗ ಬೆರೆಸಿ ಎಮ್ಮೆ ಹಾಲಿನ ಮೊಸರಿನಲ್ಲಿ ಕದಡಿ ಕುಡಿಯುವುದರಿಂದ ಅನುಕೂಲವಾಗುತ್ತದೆ.
೪. ಕಟ್ಟುಮೂತ್ರ ಅಥವಾ ಮೂತ್ರ ವಿಸರ್ಜನೆ ಸಮಸ್ಯೆ ಇರುವವರು ನೇರಳೆ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ನಿವಾರಣೆಯಾಗುತ್ತದೆ.
೫. ಸ್ವಲ್ಪಸ್ವಲ್ಪವೇ ಮೂತ್ರ ವಿಸರ್ಜನೆಯಾಗುತ್ತಿದ್ದರೆ ಅಂತಹ ಸಂದರ್ಭದಲ್ಲಿ ಎಳನೀರಿಗೆ ನಿಂಬೆರಸವನ್ನು ಬೆರೆಸಿ ಕುಡಿದರೆ ಮೂತ್ರ ವಿಸರ್ಜನೆ ಸುಲಲಿತವಾಗಿ, ಸಂಪೂರ್ಣವಾಗಿ ವಿಸರ್ಜಿಸಲ್ಪಡುತ್ತದೆ.
೬. ಉರಿಮೂತ್ರ: ನಿಂಬೆರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ಉರಿಮೂತ್ರ ಕಡಿಮೆ ಆಗುತ್ತದೆ.
೭. ಅಲ್ಪಾಂಶ ಮೂತ್ರ ಅಥವಾ ಉರಿಮೂತ್ರದ ಸಮಸ್ಯೆ ಇರುವವರಿಗೆ ಈ ಹಣ್ಣಿನ ರಸ ಸೇವನೆಯಿಂದ ಅನುಕೂಲವಾಗುತ್ತದೆ.
೮. ಮೂತ್ರಕೋಶದಲ್ಲಿ ಕಲ್ಲುಂಟಾದರೆ ಹುರುಳಿಕಾಳನ್ನು ಚೆನ್ನಾಗಿ ತೊಳೆದು ರಾತ್ರಿ ನೆನೆಹಾಕಿ. ಬೆಳಿಗ್ಗೆ ನೆಂದ ನೀರಿನ ಸಮೇತ ೧ಕ್ಕೆ ನಾಲ್ಕರಷ್ಟು ನೀರು ಸೇರಿಸಿ ಚೆನ್ನಾಗಿ ಬೇಯಿಸಿ, ಶೋಧಿಸಿ ಅದಕ್ಕೆ ನಿಂಬೆರಸ ಬೆರೆಸಿ ಕುಡಿಯಬೇಕು. ಈ ರೀತಿ ಸತತವಾಗಿ ಕೆಲವು ದಿನಗಳ ಕಾಲ ಮಾಡಬೇಕು. ಇದರಿಂದ ಮೂತ್ರಕೋಶದಲ್ಲಿ ಉಂಟಾಗಿರುವ ಕಲ್ಲು ಕರಗಿ ವಿಸರ್ಜಿತವಾಗುತ್ತದೆ.
೯. ಕಟ್ಟುಮೂತ್ರ: ಮೂಲಂಗಿ ಸೊಪ್ಪನ್ನು ಅರೆದು ರಸ ತೆಗೆದುಕೊಳ್ಳಿ. ಆ ರಸವನ್ನು ಹಸಿಯಾಗಿರುವಾಗಲೇ ಸೇವಿಸಿದರೆ ಕಟ್ಟುಮೂತ್ರ ನಿವಾರಣೆಯಾಗುತ್ತದೆ.
೧೦. ಕಟ್ಟುಮೂತ್ರ: ಬಾಳೆದಿಂಡಿನ ರಸದಲ್ಲಿ ಏಲಕ್ಕಿ ಪುಡಿಯನ್ನು ಮಿಶ್ರ ಮಾಡಿ ಸೇವಿಸಿದರೆ ಕಟ್ಟುಮೂತ್ರ ನಿವಾರಣೆಯಾಗುತ್ತದೆ ಹಾಗೂ ಮೂತ್ರಕೋಶದಲ್ಲಿ ಬರುವ ಕೀವು ಕಡಿಮೆ ಆಗುತ್ತದೆ.
೧೧. ಉರಿಮೂತ್ರ – ಕಟ್ಟುಮೂತ್ರ: ಏಲಕ್ಕಿಯನ್ನು ಹಾಲಿನಲ್ಲಿ ಕುದಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಉರಿಮೂತ್ರ ಉಪಶಮನವಾಗುತ್ತದೆ.
೧೨. ರಾತ್ರಿ ಮೂತ್ರವಿಸರ್ಜನೆ ಮಾಡುವ ಮಕ್ಕಳಿಗೆ ಒಣಖರ್ಜೂರದ ಬೀಜವನ್ನು ಸಾಣೆಕಲ್ಲಿನಲ್ಲಿ ತೇಯ್ದು ಅದರ ಗಂಧವನ್ನು ನೆಕ್ಕಿಸಿದರೆ ದಿನ ಕ್ರಮೇಣ ಮೂತ್ರ ವಿಸರ್ಜನೆ ಮಾಡುವುದು ಕಡಿಮೆ ಆಗುತ್ತದೆ.
೧೩. ಕರಬೂಜಹಣ್ಣಿನ ಬೀಜವನ್ನು ರುಬ್ಬಿ ರಸ ತೆಗೆದು ಶೋಧಿಸಿ ಕುಡಿದರೆ ಕಟ್ಟುಮೂತ್ರ ನಿವಾರಣೆಯಗುತ್ತದೆ ಹಾಗೂ ಮೂತ್ರಪಿಂಡದಲ್ಲಿನ ಕಲ್ಲುಗಳು ಕರಗುತ್ತಾ ಬರುತ್ತದೆ.
೧೪. ಸೌತೆಬೀಜ ಮತ್ತು ಎಳ್ಳು ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ. ಚೆನ್ನಾಗಿ ಅರೆದು ಹಾಲು ಹಾಗೂ ತುಪ್ಪದ ಜೊತೆಯಲ್ಲಿ ಸೇರಿಸಿ ಸೇವಿಸಿದರೆ ಎಲ್ಲಾ ವಿಧವಾದ ಉರಿಮೂತ್ರ, ಕಟ್ಟುಮೂತ್ರ ನಿವಾರಣೆಯಾಗುತ್ತದೆ.
೧೫. ದ್ರಾಕ್ಷಿ ಗಿಡದ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಶೋಧಿಸಿ ಆ ಕಷಾಯಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಸೇವಿಸಿದರೆ ಮೂತ್ರ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತದೆ.
೧೬.ಮೂತ್ರದೊಡನೆ ರಕ್ತ ಬೀಳುವುದಕ್ಕೆ ಹಸಿಬೆಟ್ಟದ ನೆಲ್ಲಿಕಾಯಿಯನ್ನು ಅರೆದು ಪಾನಕದ ರೀತಿ ಮಾಡಿ ಸಕ್ಕರೆ ಹಾಕಿ ಕುಡಿದರೆ ರಕ್ತ ಬೀಳುವುದು ಮತ್ತು ಉರಿ ಕಡಿಮೆ ಆಗುತ್ತದೆ.
೧೭. ವಿಪರೀತ ಮೂತ್ರ ವಿಸರ್ಜನೆಗೆ ಹುಣಸೆಸೊಪ್ಪಿನ ರಸವನ್ನು ತೆಗೆದು ಸಮಪ್ರಮಾಣ ಮಜ್ಜಿಗೆ ಜೊತೆ ಸೇರಿಸಿ ಸೇವಿಸುವುದರಿಂದ ಕಡಿಮೆಯಾಗುತ್ತದೆ.
೧೮. ವಿಪರೀತ ಮೂತ್ರಕ್ಕೆ ಬಿಳಿದಾಸವಾಳದ ಮೊಗ್ಗುಗಳು ೫, ಸ್ವಲ್ಪ ಕಲ್ಲುಸಕ್ಕರೆ ಸೇರಿಸಿ ಅರೆದು ಸೇವಿಸುತ್ತಾ ಬಂದರೆ ಮೇಲಿಂದ ಮೇಲೆ ಹೋಗುವ ಮೂತ್ರ ವಿಸರ್ಜನೆ ಕಡಿಮೆ ಆಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧.