ಮೂತ್ರಕೋಶದ ಸೋಂಕಿಗೆ ಪರಿಹಾರ

ಮೂತ್ರಕೋಶದ ಸೋಂಕು ಅಥವಾ ಉರಿ ಮೂತ್ರ ಬಹಳ ಕಿರಿ ಕಿರಿ ಉಂಟು ಮಾಡುವ ಸಮಸ್ಯೆ. ನಮ್ಮ ಮೂತ್ರಕೋಶದ ಯಾವುದೇ ಭಾಗದಲ್ಲಿ ಆಗುವ ಬ್ಯಾಕ್ಟೀರಿಯಾ ಸೋಂಕಿನಿಂದ ಈ ರೀತಿಯ ಸೋಂಕು ಉಂಟಾಗುತ್ತದೆ. ಉರಿ ಮೂತ್ರವು ಈ ಸೋಂಕಿನ ಒಂದು ರೋಗ ಲಕ್ಷಣ. ಇದಲ್ಲದೆ ಬಹಳ ಚಳಿಯಾಗುವುದು, ಜ್ವರದ ಲಕ್ಷಣಗಳು ಕೂಡ ಸೋಂಕು ಹೆಚ್ಚಾದಾಗ ಕಾಣಿಸಿಕೊಳ್ಳುತ್ತವೆ.
ದೇಹದ ಉಷ್ಣಾಂಶ ಹೆಚ್ಚಾದಾಗ ಮೂತ್ರದ ಬಣ್ಣ ಹೆಚ್ಚು ಹೆಚ್ಚು ಹಳದಿಯಾಗಿರುತ್ತದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಅಥವಾ ಉರಿಯುತ್ತದೆ. ಕೆಲವರಿಗೆ ಇದರಿಂದ ಮೂಗು ಕಟ್ಟಿ ನೆಗಡಿಯಾದಂತೆ ಅನುಭವವಾಗುತ್ತದೆ. ಇನ್ನೂ ಕೆಲವರಿಗೆ ಮೊಡವೆಗಳು ಏಳುವುದು ಕೂಡ ಸಹಜ.
ದೇಹದ ಉಷ್ಣಾಂಶ ಹಲವಾರು ಕಾರಣಗಳಿಂದ ಹೆಚ್ಚಾಗುತ್ತದೆ. ಬೇಸಿಗೆಯ ಸಮಯದಲ್ಲಿ ಇದು ಇನ್ನೂ ಹೆಚ್ಚು. ನಮ್ಮ ದೇಹವು ಪ್ರತಿಯೊಂದು ಸಲ ಮೂತ್ರ ವಿಸರ್ಜನೆಯ ಸಮಯದಲ್ಲಿ ದೇಹದಲ್ಲಿ ಸೇರಿರುವ ಅನಗತ್ಯ ಹಾಗೂ ಅಹಿತ ಕೀಟಾಣುಗಳನ್ನು ಮೂತ್ರದೊಂದಿಗೆ ಹೊರಹಾಕುತ್ತದೆ. ಆದರೆ ಕೆಲವು ಬಾರಿ ಕೀಟಾಣುಗಳು ಹೆಚ್ಚು ಇದ್ದು ಅವು ಮೂತ್ರನಾಳಕ್ಕೆ ಅಂಟಿಕೊಂಡು ಅಲ್ಲೇ ಬೆಳೆದು ಬಿಡುತ್ತವೆ.
ನೀರು ಜೀವ ಜಲ. ನಮ್ಮ ದೇಹಕ್ಕೆ ಅತಿ ಮುಖ್ಯವಾಗಿ ಬೇಕಾದ ಪದಾರ್ಥ ನೀರು. ಅದರಲ್ಲೂ ಬೇಸಿಗೆಯಲ್ಲಿ ಬೆವರಿನ ರೂಪದಲ್ಲಿ ಹಾಗೂ ದೇಹದ ಉಷ್ಣಾಂಶ ಕಾಪಾಡಿಕೊಳ್ಳುವಲ್ಲಿ ನಮ್ಮ ದೇಹವು ಬಹಳಷ್ಟು ನೀರನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ಅದನ್ನು ಸರಿದೂಗಿಸಲು ನಾವು ಹೆಚ್ಚು ಹೆಚ್ಚು ನೀರು ಕುಡಿಯಬೇಕು. ಬಾಯಾರಿದ ಮೇಲೆ ಅಲ್ಲದೆ, ಬಾಯಾರುವ ಮುನ್ನ ನೀರನ್ನು ಸೇವಿಸುತ್ತಿರಿ. ನಾವು ಕಛೇರಿಯಲ್ಲಿ ಎ ಸಿ ಯಲ್ಲಿ ಕೂತು ಅಥವಾ ಮನೆಯೊಳಗೆ ಇದ್ದು ನಮಗೆ ಬಾಯಾರಿಕೆ ಆಗದೆ ಇದ್ದರೂ ಸಹ, ನೀರು ಕುಡಿಯುವುದನ್ನು ನಾವು ನಮ್ಮ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.
ಎಳನೀರು ನಮ್ಮ ಕಲ್ಪವೃಕ್ಷ ನಮಗಾಗಿ ಕೊಡುವ ಕೊಡುಗೆ. ಎಳನೀರು ಉರಿಮೂತ್ರ ಹಾಗೂ ಮೂತ್ರ ಕೋಶದ ಸೋಂಕಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ನಮಗೆ ಸುಲಭವಾಗಿ ಸಿಗುವ ಎಳನೀರನ್ನು ಬೇಸಿಗೆಯಲ್ಲಿ ದಿನಕ್ಕೊಮ್ಮೆ ಆದರೂ ತಪ್ಪದೆ ಸೇವಿಸಿ. ಎಳನೀರು ನಮ್ಮ ಮೂತ್ರವನ್ನು ಶುದ್ದಿ ಮಾಡುತ್ತದೆ. ಹಾಗೆಯೇ, ಎಳನೀರು ಕುಡಿದಾಗ ನಾವು ಹೆಚ್ಚು ಮೂತ್ರ ವಿಸರ್ಜಿಸುವುದರಿಂದ ಸೋಂಕು ಕೂಡ ಕಡಿಮೆಯಾಗುತ್ತದೆ.
ಬಾರ್ಲಿ ಗಂಜಿಯು ದೇಹದ ಉಷ್ಣಾಂಶವನ್ನು ಮಾಂತ್ರಿಕವಾಗಿ ನಿಯಂತ್ರಿಸುತ್ತದೆ. ಇದು ನಮ್ಮ ದೇಹಕ್ಕೆ ಬಹಳ ತಂಪು. ಬಾರ್ಲಿ ನಮಗೆ ಬೇಕಾದ ನಾರಿನ ಅಂಶವನ್ನು ಕೂಡ ನೀಡುತ್ತದೆ. ಬಾರ್ಲಿಯನ್ನು ನೆನೆಸಿ ನಂತರ ಕುದಿಸಿ ಗಂಜಿ ಮಾಡಿಕೊಂಡು ಕುಡಿಯುವುದರಿಂದ ಮೂತ್ರಕೋಶದ ಸೋಂಕು ಕಡಿಮೆಯಾಗುತ್ತದೆ. ದಿನ ನಿತ್ಯ ಸೇವಿಸುವುದರಿಂದ ಸೋಂಕು ತಗಲುವ ಸಾಧ್ಯತೆಗಳೇ ಕಡಿಮೆ ಆಗುತ್ತವೆ. ದಿನ ನಿತ್ಯ ಒಳ ಉಡುಪುಗಳನ್ನು ಬದಲಿಸಬೇಕು. ಬಳಸಿದ ಒಳ ಉಡುಪುಗಳನ್ನು ಚೆನ್ನಾಗಿ ಒಗೆದು ಆದಷ್ಟು ಬಿಸಿಲಿನಲ್ಲಿ ಒಣಗಿಸಿಡಬೇಕು.