ಮೂಢನಂಬಿಕೆ ಕಂದಾಚಾರ ಆಚರಣೆ ಅಪರಾಧ

ಕುಣಿಗಲ್, ಆ. ೧೯- ಸಮಾಜದಲ್ಲಿ ಮೂಢನಂಬಿಕೆ ಕಂದಾಚಾರ ಆಚರಣೆ ಮಾಡುವುದು ಅಪರಾಧವಾಗುವುದರಿಂದ ಇವುಗಳಿಂದ ದೂರು ಸರಿದು ಕಾನೂನು ಅರಿವು ಪಡೆಯುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಜೇತ್ ವಿ. ತಿಳಿಸಿದರು.
ತಾಲ್ಲೂಕು ಕಸಬಾ ಹೋಬಳಿ ಗೊಲ್ಲರಹಟ್ಟಿ ಕಿತ್ನಮಂಗಳ ಗ್ರಾಮದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಶಿಶು ಅಭಿವೃದ್ಧಿ ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಗೊಲ್ಲರಟ್ಟಿಯಲ್ಲಿ ಕಾನೂನು ಅರಿವು ನೆರವು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮೂಢನಂಬಿಕೆ, ಕಂದಾಚಾರಣೆ ಆಚರಿಸುವುದು ಕಾನೂನು ವಿರುದ್ಧವಾಗಿದ್ದು ಇಂತಹ ಯಾವುದೇ ಪ್ರಕರಣಗಳು ನಡೆದರು ಅಂತಹ ಪ್ರಕರಣಗಳು ಶಿಕ್ಷಾರ್ಹ ಅಪರಾಧವಾಗುವುದರಿಂದ ಇಂಥ ಪ್ರಕರಣಗಳು ಎಲ್ಲೇ ನೀಡಿದರು ಅಧಿಕಾರಿಗಳು ಹಾಗೂ ನ್ಯಾಯಾಲಯದ ಗಮನಕ್ಕೆ ತರುವ ಮೂಲಕ ಮೂಢನಂಬಿಕೆ ಕಂದಾಚಾರಕ್ಕೆ ಕಡಿವಾಣ ಹಾಕಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಯೋಗೇಶ್ ಜಿ. ಮಾತನಾಡಿ, ೨೧ನೇ ಶತಮಾನದಲ್ಲಿ ರಾಷ್ಟ್ರವು ಆರ್ಥಿಕ ರಂಗದಲ್ಲಿ ಐದನೇ ಸ್ಥಾನದಲ್ಲಿದ್ದು ಹಿಂದುಳಿದ ಸಮಾಜದಲ್ಲಿ ಅದರಲ್ಲೂ ಮಹಿಳೆಯರಲ್ಲಿ ಕಂದಾಚಾರ ಮೂಢನಂಬಿಕೆಗಳು ಹೆಚ್ಚಾಗುತ್ತಿದ್ದು ಇವುಗಳಿಂದ ದೂರ ಸರಿದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ಬರುವ ಮೂಲಕ ಕಂದಾಚಾರ ಕಟ್ಟುಪಾಡುಗಳನ್ನು ಬಿಟ್ಟು ಹೊರ ಬರಬೇಕು. ಯಾವುದೇ ಮಗು ಹುಟ್ಟಿದ ನಂತರ ಜನನ ನೋಂದಣಿ, ಮರಣ ಹೊಂದಿದರೆ ಮರಣ ಪತ್ರ ಶಿಕ್ಷಣ ಆಸ್ತಿ ಆಧಾರ್ ಕಾರ್ಡ್ ಪಡೆಯಲು ಅತ್ಯವಶ್ಯ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ೬ ರಿಂದ ೧೪ರ ವಯಸ್ಸಿನ ಮಕ್ಕಳಿಗೆ ಉಚಿತ ಶಿಕ್ಷಣ ಜಾರಿಗೆ ತಂದಿದೆ. ಬಾಲ್ಯ ವಿವಾಹ ಅಪರಾಧವಾಗಿದ್ದು ಅಂತ ಪ್ರಕರಣಗಳು ನಡೆದರೆ ಕಾನೂನು ಕ್ರಮ ಜರುಗಿಸಲಾಗುವುದು. ಮಹಿಳೆಯರು ಕಂದಾಚಾರ ಕಟ್ಟುಪಾಡುಗಳನ್ನು ಬಿಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಲಕ್ಷ್ಮೀ ನರಸಿಂಹ, ತಹಶೀಲ್ದಾರ್ ವಿಶ್ವನಾಥ್, ಶಿಶು ಅಭಿವೃದ್ಧಿ ಅಧಿಕಾರಿ ಶಶಿಧರ್, ವಕೀಲರ ಸಂಘದ ಅಧ್ಯಕ್ಷ ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು