ಮೂಢನಂಬಿಕೆಗಳಿಂದ ದೂರವಿರಲು ನರಸಿಂಗರಾವ ಕರೆ

ಬೀದರ, ಜ. 11ಃ ಮೂಲಭಾರತಿಯರು ಮೂಢನಂಬಿಕೆಗಳಿಕೆಗಳಿಗೆ ಅಂಟಿಕೊಂಡಿರುವ ಕಾರಣ, ಮಾಹಿತಿ ತಂತ್ರಜ್ಞಾನ ಯುಗದಲ್ಲಿಯೂ ಶೋಷಣೆಗೊಳಗಾಗುತ್ತಿದ್ದೇವೆ. ಆದ್ದರಿಂದ ಮೂಲಭಾರತಿಯರು ಮೂಢನಂಬಿಕೆಗಳಿಂದ ದೂರವಿರಬೇಕು. ಅಲ್ಲದೇ ಮೂಲಭಾರತಿಯರು ತಮ್ಮ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬಿ. ಶ್ಯಾಮಸುಂದರ ರವರ ಸೋದರಳಿಯ ನರಸಿಂಗರಾವ ಹೈದರಾಬಾದ ಅವರು ಮೂಲಭಾರತಿಯರಿಗೆ ಕರೆ ನೀಡಿದರು.

ಅವರು ಬಿ. ಶ್ಯಾಮಸುಂದರ ರವರ ಜನ್ಮ ದಿನಾಚರಣೆ ಸಮಿತಿ ಹಾಗೂ ಅಭಿಮಾನಿಗಳ ಬಳಗದ ವತಿಯಿಂದ ರವಿವಾರ ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದ ಎಚ್. ಶ್ರೇಯಸ್ಕರ್‍ರವರ ವೇದಿಕೆಯಲ್ಲಿ ಬಿ. ಶ್ಯಾಮಸುಂದರರವರ 112ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಮಹಾತ್ಮಾ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಡಾ. ಬಿಆರ್. ಅಂಬೇಡ್ಕರ್, ಬಿ. ಶ್ಯಾಮಸುಂದರ ಮತ್ತು ಕಾನ್ಶೀರಾಮ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆಗೈದು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದÀರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಮೂಲನಿವಾಸಿ ಸಂಘದ ರಾಷ್ಟ್ರೀಯ ಅಧ್ಯಕ್ಷ ತಾರಾರಾಮ ಮೇಹ್ನಾ ಅವರು ಬಿ ಶ್ಯಾಮಸುಂದರ ರವರು ದಲಿತ ಚಳವಳಿಯ ನಾಯಕರೇ?. ಮೂಲಭಾರತಿ ಚಳವಳಿಯ ನಾಯಕರೇ? ಅಥವಾ ಹೈದ್ರಾಬಾದ ಮುಕ್ತಿ ಸಂಗ್ರಾಮದಲ್ಲಿ ಬಿ. ಶ್ಯಾಮಸುಂದರ ರವರ ಪಾತ್ರ ವಿಷಯ ಕುರಿತು ಮೊದಲ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡುತ್ತ, ಬಿ. ಶ್ಯಾಮಸುಂದರ ಅವರು ದಕ್ಷಿಣ ಭಾರತ ಅಂಬೇಡ್ಕರ್ ಆಗಿದ್ದಾರೆ. ಅಲ್ಲದೇ ಅವರು ರಾಷ್ಟ್ರೀಯ ಜನನಾಯಕರು. ಬಿ. ಶ್ಯಾಮಸುಂದರ ರವರು ದಲಿತ ಚಳವಳಿಯ ನಾಯಕರಾಗಿರದೇ ಮೂಲಭಾರತಿಯರ ನಾಯಕಾರಾಗಿದ್ದರು ಎಂದರು.

ಬಿ. ಶ್ಯಾಮಸುಂದರ ರವರು ಉತ್ತರ ಪ್ರದೇಶದಲ್ಲಿ 1968 ರಲ್ಲಿ ನಡೆಸಿದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮುಸ್ಲಿಂರು ಭವಿಷ್ಯದಲ್ಲಿ ದಲಿತರಂತೆ ಶೋಷಣೆಗೊಳಗಾಗಲಿದ್ದಾರೆ. ಆಜ್ ಕಾ ಮುಸಾಲ್ಮಾನ ಕಲ್ ಕಾ ಹರಿಜನ ಎಂದು ಭವಿಷ್ಯ ನುಡಿದಿದ್ದು, ಈಗ ನಿಜವಾಗುತ್ತಿದೆ ಎಂದರು.

ಬಿ. ಶ್ಯಾಮಸುಂದರ ರವರು ನಿಜಾಮ ಆಡಳಿತದಲ್ಲಿ ಭೂಹೀನರಿಗೆ ಭೂ ಮಾಲೀಕರನ್ನಾಗಿ ಮಾಡಿದರು. ಆದರೆ, ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳು ತಿದ್ದುಪಡಿ ಮಾಡುವ ಮೂಲಕ ರೈತರ ಕತ್ತು ಹಿಸುಕುವ ಕಾರ್ಯ ಮಾಡುತ್ತಿದೆ. ಉತ್ತರ ಭಾರತದಲ್ಲಿ ನಡೆಯುತ್ತಿರುವ ಚಳವಳಿಗೆ ಕೇಂದ್ರ ಸರ್ಕಾರ ದಿನಕ್ಕೊಂದು ಹೆಸರು ನೀಡುತ್ತಿದೆ. ಇಲ್ಲಿಯವರೆಗೆ ರೈತ ಚಳವಳಿಗಾರರೊಂದಿಗೆ ಕೇಂದ್ರ ಸರ್ಕಾರದ ಪ್ರತಿನಿಧಿಗಳು ನಡೆಸಿದ್ದ 9 ಸುತ್ತಿನ ಮಾತುಕತೆ ವಿಫಲಗೊಂಡಿದೆ ಎಂದರು.

ರೈತ ಚಳವಳಿಗಾರರು ಮೂರು ಕೃಷಿ ತಿದ್ದುಪಡಿ ಕಾಯ್ದೆಗಳು ಹಿಂಪಡೆಯಬೇಕು ಎಂದು ಪಟ್ಟು ಹಿಡದಿದ್ದಾರೆ. ಇದಕ್ಕೊಪ್ಪದ ಕೇಂದ್ರ ಸರ್ಕಾರದ ಪ್ರತಿನಿಧಿಗಳು ಕೈ, ಕಾಲು, ಕಡಿಯುವುದಿಲ್ಲ. ಕಣ್ಣು ಕಿಳುವುದಿಲ್ಲವಾದರೂ ಕತ್ತು ಮಾತ್ರ ಕೊಯ್ಯುತ್ತೇವೆ ಎಂಬ ಮಾತುಗಳನ್ನಾಡುತ್ತಿದ್ದಾರೆ. ಅಲ್ಲದೇ ಕೃಷಿ ಕಾಯ್ದೆಗಳ ಸಂಶೋಧನೆಯ ಹೆಸರಿನಲ್ಲಿ ರೈತರ ಕತ್ತು ಹಿಸಕಲು ಕೇಂದ್ರ ಸರ್ಕಾರ ಸಜ್ಜಾಗಿದೆ ಎಂದರು.

ಮಾಜಿ ಶಾಸಕ ಜುಲ್ಫೆಕಾರ್ ಹಾಸ್ಮಿ ಅವರು ಮಾತನಾಡುತ್ತ, ಶೇರ್-ಎ-ದಖ್ಖನ್ ಎಂಬ ಬಿರುದು ಪಡೆದಿರುವ ಬಿ. ಶ್ಯಾಮಸುಂದರ ಅವರು ದಕ್ಷಿಣ ಭಾರತದ ಅಂಬೇಡ್ಕರ್ ಎಂದರೆ ತಪ್ಪೇನಿಲ್ಲ. ಶೋಷಿತ ವರ್ಗಗಳ ಏಕತೆಗಾಗಿ ಹಾಗೂ ಏಳಿಗೆಗಾಗಿ ಹೋರಾಟ ಮಾಡಿದ ಮಹಾನ ವ್ಯಕ್ತಿಯಾಗಿದ್ದರು ಎಂದರು.

ಬಿ. ಶ್ಯಾಮಸುಂದರ ಅವರು ಭಾಲ್ಕಿ ದ್ವಿಸದಸ್ಯ ವಿಧಾನಸಭಾ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅಲ್ಲದೇ ನಿಜಾಂ ಆಡಳಿತದಲ್ಲಿ ಸಂಪುಟ ದರ್ಜೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.

ಬೀದರ ಲೋಕಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು. ಡಾ. ಬಿ.ಆರ್. ಅಂಬೇಡ್ಕರ್‍ರವರಿಗೆ ಕಾಂಗ್ರೆಸ್ ಸೋಲಿಸಿದಂತೆ ಬಿ. ಶ್ಯಾಮಸುಂದರ ಅವರನ್ನು ಸೋಲಿಸಲು ಪ್ರಧಾನಮಂತ್ರಿ ಜವಾಹರಲಾಲ ನೆಹರು ಅವರು ಬೀದರ ಜಿಲ್ಲೆಗೆ ಆಗವಿಸಿ ಚುನಾವಣಾ ಪ್ರಚಾರ ನಡೆಸಿದ್ದರು ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದ ನಾಯಕರಾದ ಮಾಜಿ ಮುಖ್ಯಮಂತ್ರಿ ದಿವಂಗತ ಎನ್. ಧರಂಸಿಂಗ ಅವರು ಬಿ. ಶ್ಯಾಮಸುಂದರ ರವರ ಚುನಾವಣಾ ಏಜೆಂಟರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಚುನಾವಣೆಯಲ್ಲಿ ಕರಪತ್ರಗಳು ಹಂಚಿದ್ದಾರೆ. ಈ ಭಾಗದ ಅನೇಕ ಕಾಂಗ್ರೆಸ್ ಪ್ರಮುಖರು ಬಿ. ಶ್ಯಾಮಸುಂದರ ಅವರ ಗರಡಿಯಲ್ಲಿ ಪಳಗಿದರಾಗಿದ್ದಾರೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರೇಮಸಾಗರ ದಾಂಡೇಕರ್ ಅವರು ಮಾತನಾಡುತ್ತ, ನಿಜಾಂ ಆಡಳಿತದಲ್ಲಿ ಮಂತ್ರಿಯಾಗಿದ್ದ ಬಿ. ಶ್ಯಾಮಸುಂದರರವರು ಆ ಕಾಲದಲ್ಲಿಯೇ 1 ಕೋಟಿ ರೂ. ಅನುದಾನವನ್ನು ಶಿಕ್ಷಣಕ್ಕಾಗಿ ಮೀಸಡಲು ನಿಜಾಂನ ಮನವೊಲಿಸಿದ್ದರು. ಅಲ್ಲದೇ ಈ ಭಾಗದಲ್ಲಿ 28 ವಸತಿ ನಿಲಯಗಳು ಆರಂಭಿಸಿ, ಮೂಲಭಾರತಿ ವಿದ್ಯಾರ್ಥಿಗಳ ವಿದ್ಯಾಭ್ಯಾಷಕ್ಕೆ ಅನುಕೂಲ ಹಾಗೂ ಭೂಹೀನರಾಗಿದ್ದ ಮೂಲಭಾರತಿಗಳಿಗೆ ಗೈರಾಣಿ ಭೂಮಿ ನೀಡುವ ಮೂಲಕ ಒಕ್ಕೂಲತ ಮಾಡಲು ಅವಕಾಶ ಮಾಡಿಕೊಟ್ಟ ಶ್ರೇಯಸ್ಸು ಬಿ. ಶ್ಯಾಮಸುಂದರ ಅವರಿಗೆ ಸಲ್ಲುತ್ತದೆ ಎಂದರು.

ಸಮಾಂತರ ಭಾರತ ನಿರ್ದೇಶಕ ಎಸ್. ವರುಣಕುಮಾರ ಅವರು ಮಾತನಾಡುತ್ತ, 5 ಕೋಟಿ ರೂ. ವೆಚ್ಚದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‍ರವರ ಸಮಗ್ರ ಸಾಹಿತ್ಯವನ್ನು 12 ಖಂಡಗಳಲ್ಲಿ ಮುದ್ರಣ ಮಾಡಲು ಉದ್ದೇಶಿಸಲಾಗಿದೆ. ಈ ಕಾರ್ಯವನ್ನು 1-2 ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಪಂಜಾಬ್‍ನಿಂದ ಆಗಮಿಸಿದ್ದ ದಾದಾಸಾಹೇಬ ಕಾನ್ಸಿರಾಮ ಅವರ ಸೋದರಳಿಯ ಪ್ರಭಜಿತಸಿಂಗ್, ಕಲಬುರಗಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿ.ಟಿ ಕಾಂಬಳೆ, ಸಂವಿಧಾನ ರಕ್ಷಣಾ ಸಮಿತಿಯ ಮಹಾಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ, ಬಿ.ಶ್ಯಾಮಸುಂದರ ಅವರ ಒಡನಾಡಿ ಪ್ರಕಾಶ ಮೂಲಭಾರತಿ, ಬಾಮ್‍ಸೇಫ್ ಕೇಂದ್ರ ಕಾರ್ಯಕಾರಿಣಿ ಸದಸ್ಯ ಬಿ.ಬಿ.ಮೇಶ್ರಂ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಸೈಯ್ಯದ್ ಮಕ್ಸೂದ್ ಮತ್ತು ವರುಣಕುಮಾರ ಅವರ ಸಂಗ್ರಹ ಸಂಪಾದನೆ ಉರ್ದು ಭಾಷೆಯಿಂದ ಕನ್ನಡಕ್ಕೆ ಕಿಆನರಾ ದಿನೆ ಅವರು ಅನುವಾದ ಮಾಡಿರುವ ಬಿ. ಶ್ಯಾಮಸುಂದರ ( ಜೀವನದಲ್ಲಿ ನಡೆದ ಘಟನೆಗಳು, ಭಾಷಣಗಳು, ಸಂದರ್ಶನಗಳು ಲೇಖನಗಳ ಸಂಗ್ರಹ ) ಪುಸ್ತಕ, ಮೀನಿ ಡೈರಿ, ಕ್ಯಾಲಿಂಡರ್ ಅನ್ನು ಬಿಡುಗಡೆ ಮಾಡಲಾಯಿತು.

ಬಿ. ಶ್ಯಾಮಸುಂದರ ರವರ ಜನ್ಮ ದಿನಾಚರಣೆ ಸಮಿತಿ ಹಾಗೂ ಅಭಿಮಾನಿಗಳ ಬಳಗದ ಅಧ್ಯಕ್ಷರಾದ ಮಹಾದೇವ ಕಾಂಬಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಎಚ್. ಶ್ರೇಯಸ್ಕರ್ ಅವರು ಬಿ. ಶ್ಯಾಮಸುಂದರ ಅವರ ಸಮಗ್ರ ಸಾಹಿತ್ಯವನ್ನು ಒಂದುಕಡೆ ಸಂಗ್ರಹಿಸಿಕೊಟ್ಟಿದ್ದಾರೆ. ಅದಕ್ಕಾಗಿ ಈ ವೇದಿಕೆಗೆ ಎಚ್. ಶ್ರೇಯಸ್ಕರ್ ರವರ ಹೆಸರು ಇಡಲಾಗಿದೆ ಎಂದರು.

ಬಕ್ಕಪ್ಪ ದಂಡಿನ, ಶಂಕರ ಚೊಂಡಿ, ದೇವದಾಸ ಚಿಮಕೋಡ ಹಾಗೂ ಸಂಗಡಿಗರು ಭೀಮ ಕ್ರಾಂತಿ ಗೀತೆಗಳು ಹಾಡಿದರು. ಸುರೇಶ ಟಾಳೆ ಸ್ವಾಗತಿಸಿದರು. ಅಶೋಕಕುಮಾರ ಮಾಳಗೆ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಮುಂಬೈ ಬಾಮ್‍ಸೇಫ್ ರಾಷ್ಟ್ರೀಯ ಅಧ್ಯಕ್ಷ ಬಿ.ಡಿ. ಬೋರಕರ್ ವಿಧಾನ ಪರಿಷತ್ ಮಾಜಿ ಸದಸ್ಯರಾದ ಮಾರುತಿ ಡಿ. ಮಾಲೆ, ಹೈದರಾಬಾದ ವಿಧಾನ ಪರಿಷತ್ ಸದಸ್ಯರಾದ ಸೈಯದ್ ಅಮೀನ್ ಜಾಫ್‍ರಿ, ಅಣ್ಣಾಭಾವು ಸಾಠೆರವರ ಮರಿಮೊಮ್ಮಗ ವಿಲಾಸ ಸಾಠೆ, ಕಾನ್ಸಿರಾಮ್ ಬಾಮ್‍ಸೇಫ್ ಹರಿಯಾಣದ ರಾಷ್ಟ್ರೀಯ ಅಧ್ಯಕ್ಷ ಮಣಿರಾಮ್, ಮಾವಳಿ ಶಂಕರ, ಸೈಯದ್ ಮಕ್ಸೂದ್, ಪ್ರೊ. ಅನ್ವರ್ ಖಾನ್, ವಿಠಲದಾಸ ಪ್ಯಾಗೆ, ರಮೇಶ ಡಾಕುಳಗಿ ಸೇರಿದಂತೆ ಮಹಿಳೆಯರು, ಮಕ್ಕಳು ಹಾಗೂ ಬಿ. ಶ್ಯಾಮಸುಂದರ ಅವರ ಅನುಯಾಯಿಗಳು ಅನೇಕರಿದ್ದರು.