ಮೂಡುಬಿದಿರೆ: ಸೌಹಾರ್ದ ಸಂಘಟನೆಯಿಂದ ಉಚಿತ ಆಂಬ್ಯುಲೆನ್ಸ್ ಲೋಕಾರ್ಪಣೆ

ಮೂಡುಬಿದಿರೆ, ಜೂ.೮- ಸೌಹಾರ್ದ ಮೂಡುಬಿದಿರೆ ಚಾರಿಟೆಬಲ್ ಟ್ರಸ್ಟ್‌ನ ಮಹತ್ವಾಕಾಂಕ್ಷಿ  ಯೋಜನೆಯಾಗಿ, ಮೂಡುಬಿದಿರೆಯ ಬಡಜನತೆಗೆ ಉಚಿತ ಆಂಬ್ಯುಲೆನ್ಸ್ ಕೊಡುಗೆಯನ್ನು ಸೋಮವಾರ ಲೋಕಾರ್ಪಣೆಗೊಳಿಸಲಾಯಿತು.

ಶಾಸಕ ಉಮಾನಾಥ ಕೋಟ್ಯಾನ್ ಸ್ಕೌಟ್ಸ್ ಗೈಡ್ಸ್ ಕನ್ನಡ ಸೇವೆಯನ್ನು ಉದ್ಘಾಟಿಸಿ, ಸೌಹಾರ್ದ ಚಾರಿಟೆಬಲ್ ಟ್ರಸ್ಟ್‌ನವರು ಕೋವಿಡ್ ಸಂದಭದಿಂದ ಮೊದಲ್ಗೊಂಡು ಬಿಪಿಎಲ್ ಜನರಿಗೆ ಉಚಿತವಾಗಿ ಆಂಬ್ಯುಲೆನ್ಸ್  ಸೇವೆಯನ್ನು ಒದಗಿಸಲು ಮುಂದಾಗಿರುವುದು ಶ್ಲಾಘನೀಯ. ಸಮಾಜಕ್ಕೆ ಇದೊಂದು ಮಾದರಿ ಕೊಡುಗೆಯಾಗಿದೆ ಎಂದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ತಹಸೀಲ್ದಾರ್ ಪುಟ್ಟರಾಜು, ಮೂಡುಬಿದಿರೆ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಮುಡಾ ಅಧ್ಯಕ್ಷ ಮೇಘನಾಥ ಶೆಟ್ಟಿ , ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ  ಸುದರ್ಶನ ಎಂ., ಚೌಟರ ಅರಮನೆ ಕುಲದೀಪ ಎಂ., ಪುರಸಭಾ ಸದಸ್ಯರು, ಮುಖ್ಯಾಧಿಕಾರಿ ಇಂದು ಎಂ. ಹಾಗೂ ಸೌಹಾರ್ದ ಸಂಘಟನೆಯ ಹತ್ತು ಮಂದಿ ಸದಸ್ಯರು ಉಪಸ್ಥಿತರಿದ್ದರು.

ಸೌಹಾರ್ದದ ಅಧ್ಯಕ್ಷ ಅಬುಲಾಲ್ ಸ್ವಾಗತಿಸಿದರು. ಈ ಯೋಜನೆಗೆ ವಿಶೇಷ ಸಹಕಾರ ನೀಡಿರುವ ಮತೀನ್ ಅಹ್ಮದ್ ಅವರಿಗೆ ಕೃತಜ್ಞತೆಗಳನ್ನು ತಿಳಿಸಿ, ಬಡಜನರು ಮಾತ್ರವಲ್ಲ, ಮೂಡುಬಿದಿರೆ ಪೇಟೆ ಸುತ್ತಮುತ್ತ ನಡೆಯುವ ಅವಘಡಗಳ ಸಂದರ್ಭ ಸಾರ್ವಜನಿಕರು ಈ ಉಚಿತ ಆಂಬ್ಯುಲೆನ್ಸ್ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು.

ಸೌಹಾರ್ದದ ಕಾರ್ಯದರ್ಶಿ ಮಹಮ್ಮದ್ ಶರೀಫ್ ವಂದಿಸಿದರು.