ಮೂಡುಬಿದಿರೆ ವೈದ್ಯರ ನಡೆ-ಹಳ್ಳಿಯ ಕಡೆ ಅಭಿಯಾನಕ್ಕೆ ಚಾಲನೆ

ಮೂಡುಬಿದಿರೆ,ಜೂ.೧- ದ.ಕ. ಜಿಲ್ಲಾಡಳಿತವು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕಿನ ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೋವಿಡ್ ವಾರಿಯರ‍್ಸ್‌ಗಳಿಗಾಗಿ ವೈದ್ಯರ ನಡೆ-ಹಳ್ಳಿಯ ಕಡೆ ಅಭಿಯಾನಕ್ಕೆ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಸೋಮವಾರ ಹಸಿರು ನಿಶಾನೆ ಬೀಸಿ ಚಾಲನೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮೂಡುಬಿದಿರೆ ತಾಲೂಕು ಆಡಳಿತ ಏರ್ಪಡಿಸಿದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೋವಿಡ್ ಸೋಂಕನ್ನು ನಿಯಂತ್ರಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಕೈಗೊಳ್ಳುತ್ತಿರುವ ಪ್ರತಿಬಂಧಕ ಕ್ರಮಗಳ ಪಾಲನೆ ಮಾಡಬೇಕಾಗಿದೆ. ಸೋಂಕಿತರ ನಡುವೆ ಓಡಾಡುತ್ತ ಜವಾಬ್ದಾರಿಯ ಕೆಲಸ ಮಾಡುತ್ತಿರುವ ವೈದ್ಯರಿಂದ ತೊಡಗಿ ಆರೋಗ್ಯ ಸಹಾಯಕರು, ಪ್ರತಿಯೊಂದು ಆರೋಗ್ಯ ಕೇಂದ್ರಗಳಿಗೆ ನಿಯೋಜಿತರಾಗಿರುವ ನೋಡೆಲ್ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಕರು, ವಿವಿಧ ಇಲಾಖಾ ಸಿಬಂದಿಗಳು ಸೇರಿದಂತೆ ಎಲ್ಲ ಕೋವಿಡ್ ವಾರಿಯರ‍್ಸ್‌ಗಳ ಸೇವೆ ಮಹತ್ವಪೂರ್ಣವಾಗಿದೆ. ವಿಶೇಷವಾಗಿ ಜನರ ಆರೋಗ್ಯ ಸೇವೆಗಾಗಿ ಓಡಾಡುವ ಮಂದಿಗೆ ಜಿಲ್ಲಾಡಳಿತ ಈ ವಾಹನಗಳನ್ನು ಒದಗಿಸಿದೆ’ ಎಂದು ಹೇಳಿದರು.
ಇದೇ ಸಂದರ್ಭ, ಶಾಸಕರು ವೈದ್ಯಕೀಯ ಸಿಬಂದಿಗಳಿಗೆ ಐಸೋಲೇಶನ್ ಕಿಟ್‌ಗಳನ್ನು ಹಸ್ತಾಂತರಿಸಿದರು.
ತಹಶೀಲ್ದಾರ್ ಪುಟ್ಟರಾಜು, ಉಪತಹಸೀಲ್ದಾರ್ ವಿಶ್ವನಾಥನ್, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶಶಿಕಲಾ, ಕೋವಿಡ್ ನೋಡೆಲ್ ಅಧಿಕಾರಿ ಡಾ.ಸುಭಾಸ್ ಹೆಗ್ಡೆ, ತಾಲೂಕಿನ ಪ್ರಾಥಮಿ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್ ಎಸ್., ತಾಲೂಕು ಯುವಜನ ಸೇವಾಧಿಕಾರಿ ಶಿವಾನಂದ ಕಾಯ್ಕಿಣಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ರಾಮಕೃಷ್ಣ ಶಿರೂರು, ಹಿರಿಯ, ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯ
ಕರ್ತೆಯರು ಉಪಸ್ಥಿತರಿದ್ದರು.