ಮೂಡುಬಿದಿರೆ ವಲಯ ಗ್ಯಾರೇಜ್ ಮಾಲಕರ ಸಂಘ ಉದ್ಘಾಟನೆ, ಸನ್ಮಾನ

????????????????????????????????????

ಮೂಡುಬಿದಿರೆ, ಎ.೧೯- ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಮೂಡುಬಿದಿರೆ ವಲಯದ ಸಂಘ ಉದ್ಘಾಟನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸಮಾಜಮಂದಿರದಲ್ಲಿ ಭಾನುವಾರ ಜರುಗಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಗ್ಯಾರೇಜ್ ಮಾಲಕರ ಸಂಘವನ್ನು ಉದ್ಘಾಟಿಸಿ, ಇಂದು ಮೆಕ್ಯಾನಿಕಲ್‌ಗಳು ನೂತನ ತಂತ್ರಜ್ಞಾನಗಳ ಸಹಾಯದಿಂದ ಯಾವುದೇ ವಾಹನವನ್ನು ಉತ್ತಮವಾಗಿ ದುರಸ್ತಿ ಮಾಡಬಲ್ಲರು. ಆದಾಯದ ಮೂಲವನ್ನು ಮಾತ್ರ ನೋಡದೆ ಹಿರಿಯರ ಮಾರ್ಗದರ್ಶನ, ಅವರು ಅನುಸರಿಸಿದ ನಿಪುಣತೆ, ಪರಿಶ್ರಮ, ವೃತ್ತಿನಿಷ್ಠೆ, ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಬದಲಾವಣೆಯೊಂದಿಗೆ ನಡೆದರೆ ಒಬ್ಬ ಉತ್ತಮ ಮೆಕ್ಯಾನಿಕ್ ಆಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ದ.ಕ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಎ.ಜನಾರ್ದನ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ೩೪ ವರ್ಷಗಳಿಂದ ಮಾಲಕರ ಜೊತೆಗೆ ಗ್ಯಾರೇಜ್ ಕಾರ್ಮಿಕರ, ಗ್ರಾಹಕರ ಹಿತಾಸಕ್ತಿಗೆ ಅನುಗುಣವಾಗಿ ಗ್ಯಾರೇಜ್ ಮಾಲೀಕರ ಸಂಘವು ಸೇವೆ ಸಲ್ಲಿಸುತ್ತಿದೆ. ದೇಶದಲ್ಲಿಯೇ ಗ್ಯಾರೇಜ್ ಸಂಘದ ಸ್ವಂತ ಕಟ್ಟಡ ಹೊಂದಿರುವ ಹೆಗ್ಗಳಿಕೆಗೂ ಪಾತ್ರವಾಗಿದೆ. ತುರ್ತು ಸಂದರ್ಭದಲ್ಲಿ ಸ್ಪಂದನೆ, ಪರಸ್ಪರ ಹೊಂದಾಣಿಕೆ, ನೆರವು, ಸಮಾಜಮುಖಿ ಕೆಲಸಗಳೊಂದಿಗೆ ಸಂಘವು ಸಕಾರತ್ಮವಾಗಿ ಮುನ್ನಡೆಯುತ್ತಿದೆ ಎಂದರು.
ಸಂಘದ ಮೂಡುಬಿದಿರೆ ವಲಯ ಅಧ್ಯಕ್ಷ ಗುರುಪ್ರಸಾದ್ ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಇದೇ ಸಂದರ್ಭದಲ್ಲಿ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ವತಿಯಿಂದ ಸ್ಪೂರ್ತಿ ಶಾಲೆಗೆ ರೂ.೧೦ ಸಾವಿರ ದೇಣಿಗೆಯನ್ನು ನೀಡಲಾಯಿತು.
ಮೂಡುಬಿದಿರೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಸಂಘದ ಮಂಗಳೂರು ವಿಭಾಗ ಅಧ್ಯಕ್ಷ ದಿನೇಶ್ ಕುಮಾರ್, ಶೆಲ್ ಇಂಡಿಯಾ ಮಾರ್ಕೆಟ್ ಪ್ರೈವೆಟ್ ಲಿಮಿಡೆಟ್ ಮ್ಯಾನೇಜರ್ ನಿತಿನ್ ಕುಮಾರ್, ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ್, ಪವರ್ ಪಾಯಿಂಟ್ ಸಂಸ್ಥೆಯ ಆಡಳಿತ ನಿರ್ದೇಶಕ ಮಹೇಂದ್ರವರ್ಮ ಜೈನ್ ಮುಖ್ಯ ಅತಿಥಿಯಾಗಿದ್ದರು.
ಮೂಡುಬಿದಿರೆ ವಲಯ ಕಾರ್ಯದರ್ಶಿ ನವೀನ್ ಕುಂದರ್, ಕೋಶಾಧಿಕಾರಿ ಶಂಕರ್ ಎ.ಕೋಟ್ಯಾನ್ ಉಪಸ್ಥಿತರಿದ್ದರು. ಸೌಮ್ಯ ಕೋಟ್ಯಾನ್ ನಿರೂಪಿಸಿದರು.