ಮೂಡುಬಿದಿರೆ ತಾಲೂಕಿನಲ್ಲಿ ೨೧ ಕೋಟಿ ರೂ ವೆಚ್ಚದಲ್ಲಿ ಕುಡಿಯುವ ನೀರು ಯೋಜನೆ ಕಾಮಗಾರಿಗೆ ಗುದ್ದಲಿಪೂಜೆ

ಮೂಡುಬಿದಿರೆ, ಎ.೨೮- ಪ್ರತಿ ಮನೆಗೆ ವಿದ್ಯುತ್ ಮತ್ತು ನೀರು ಒದಗಿಸುವ ಯೋಜನೆಯನ್ನು ಕೇಂದ್ರ ಸರ್ಕಾರವು ಹಮ್ಮಿಕೊಂಡಿದೆ. ಜಲಜೀವನ್ ಯೋಜನೆಯಡಿ ೪೧ ಕೋಟಿ ರೂಪಾಯಿ ವೆಚ್ಚದಲ್ಲಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ೩೦,೦೦೦ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗುವುದು. ಬಂಟ್ವಾಳ, ಮಂಗಳೂರು ಮತ್ತು ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ೨೧೦ ಕೋಟಿ ರೂಪಾಯಿ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು ಮಂಜೂರಾತಿ ಹಂತದಲ್ಲಿದೆ. ವಾಜಪೇಯಿಯವರ ಮಹಾತ್ವಕಾಂಕ್ಷೆಯ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಕೇಂದ್ರ ಸರ್ಕಾರವು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಕೇಂದ್ರ ಸರ್ಕಾರದ ಜಲಜೀವನ್ ಯೋಜನೆಯಡಿ ಮೂಡುಬಿದಿರೆ ತಾಲೂಕಿನ ೧೨ ಗ್ರಾಮ ಪಂಚಾಯತ್‌ಗಳಲ್ಲಿ ಮನೆಮನೆಗೆ ನಲ್ಲಿ ನೀರು ಒದಗಿಸಲು ೨೧ ಕೋಟಿ ರೂಪಾಯಿ ಯೋಜನೆ ಕಾಮಗಾರಿ ಹಾಗೂ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಬೆಳುವಾಯಿ ಗ್ರಾಮದ ಕೆಸರುಗದ್ದೆಯಿಂದ ಕಾಯರ್‌ಪುಂಡುವರೆಗಿನ ಸಂಪರ್ಕ ಕಲ್ಪಿಸುವ ೫ ಕಿ.ಮೀ ರಸ್ತೆಯನ್ನು ೪.೨೫ ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಗುದ್ದಲಿಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಶಾಸಕ ಉಮಾನಾಥ ಕೊಟ್ಯಾನ್ ಮಾತನಾಡಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ ೩೦ ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಈಶ್ವರ ಕಟೀಲ್, ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಮಂಡಲ ಅಧ್ಯಕ್ಷ ಸುನೀಲ್ ಆಳ್ವ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ತಾ.ಪಂ ಉಪಾಧ್ಯಕ್ಷ ಸಂತೋಷ್, ಬೆಳುವಾಯಿ ಗ್ರಾ.ಪಂ ಅಧ್ಯಕ್ಷೆ ಸುಶೀಲ, ಉಪಾಧ್ಯಕ್ಷ ರವೀಂದ್ರ ಪೂಜಾರಿ, ಸದಸ್ಯರು, ಮಾಜಿ ಅಧ್ಯಕ್ಷ ಸೋಮನಾಥ ಕೋಟ್ಯಾನ್, ಭೂ ನ್ಯಾಯ ಮಂಡಳಿಯ ಸದಸ್ಯ ಹರ್ಷವರ್ಮ ಹೆಗ್ಡೆ, ಉದ್ಯಮಿ ಮುರಳೀಧರ ಭಟ್, ಕೃಷಿಕ ನಾಗರಾಜ ಶೆಟ್ಟಿ ಅಂಬೂರಿ, ಪ್ರಧಾನ ಮಂತ್ರಿ ಸಢಾಕ್ ಯೋಜನೆಯ ಇಂಜಿನಿಯರ್ ಪ್ರಭಾಕರ್, ಜಲಜೀವನ್ ಮಿಷನ್‌ನ ನರೇಂದ್ರ, ಇಂಜಿನಿಯರ್ ಜಗದೀಶ ಸೇಟ್, ಗುತ್ತಿಗೆದಾರ ಮೊಗ್ರೋಡಿ ಸುಧಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಭಾಸ್ಕರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.