ಮೂಡುಬಿದಿರೆ : ಕಾಂಗ್ರೆಸ್‌ನಿಂದ ರುದ್ರಭೂಮಿ ಸ್ವಚ್ಛತೆ

ಮೂಡುಬಿದಿರೆ, ಮೇ.೧- ಮಾಜಿ ಸಚಿವ ಕೆ. ಅಭಯಚಂದ್ರ ಅವರ ನೇತೃತ್ವದಲ್ಲಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜ್ಯೋತಿನಗರದಲ್ಲಿರುವ ಹಿಂದೂ ರುದ್ರಭೂಮಿಯನ್ನು ಶುಕ್ರವಾರ ಶ್ರಮದಾನದ ಮೂಲಕ ಶುಚಿಗೊಳಿಸಲಾಯಿತು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅಭಯಚಂದ್ರ ಅವರು ಪಕ್ಷದ ವತಿಯಿಂದ ರುದ್ರಭೂಮಿಗಳ ಸ್ವಚ್ಛತಾ ಕಾರ್ಯವನ್ನು ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಉಳಿದ ರುದ್ರಭೂಮಿಗಳನ್ನು ಶುಚಿಗೊಳಿಸಲಾಗುವುದು. ತಾನು ಶಾಸಕನಾಗಿದ್ದಾಗ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ರುದ್ರಭೂಮಿಗಳನ್ನು ನಿರ್ಮಿಸಲು ಸ್ಥಳ ಕಾದಿರಿಸಲಾಗಿತ್ತು. ಆದರೆ ಹಲವು ಗ್ರಾಮ ಗಳಲ್ಲಿ ಇನ್ನೂ ರುದ್ರಭೂಮಿ ನಿರ್ಮಾಣವಾಗಿಲ್ಲ. ಈ ಕಾರ್ಯ ಶೀಘ್ರ ನಡೆಯಬೇಕು. ಪುರಸಭೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ಪ್ರವೃತ್ತಿ ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಕೊರಗಪ್ಪ, ಜೊಸ್ಸೀ ಮೆನೇಜಸ್, ಮುಖಂಡರಾದ ಸಂತೋಷ್ ಶೆಟ್ಟಿ, ರಾಜೇಶ್ ಕಡಲಕೆರೆ ಮತ್ತಿತರರು ಉಪಸ್ಥಿತರಿದ್ದರು.