ಮೂಡುಬಿದಿರೆಯಲ್ಲಿ ಕೊರೋನಾ ನಿಯಮ ಉಲ್ಲಂಘನೆ : ತರಕಾರಿ ಅಂಗಡಿಗಳಿಗೆ ದಂಡ

ಮೂಡುಬಿದಿರೆ , ಎ.೨೯- ಕೊರೋನಾ ಸೋಕಿನ ೨ನೇ ಅಲೆ ನಿಯಂತ್ರಣಕ್ಕಾಗಿ ಕೊರೋನಾ ಕರ್ಫ್ಯೂ ಮಂಗಳವಾರ ರಾತ್ರಿಯಿಂದಲೇ ಜಾರಿಗೊಂಡ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟ ಮತ್ತು ಜನರಿಗೆ ಖರೀದಿಗಾಗಿ ಬೆಳಿಗ್ಗೆ ೬ರಿಂದ ೧೦ ಗಂಟೆವರೆಗೆ ಅವಕಾಶವಿದ್ದರೂ ಮೂಡುಬಿದಿರೆಯಲ್ಲಿ ೨ ತರಕಾರಿ ಸಹಿತ ಹಣ್ಣುಹಂಪಲುಗಳ ಅಂಗಡಿಗಳಲ್ಲಿ ಕೊರೋನಾ ನಿಯಮ ಉಲ್ಲಂಘಿಸಿ ಹೆಚ್ಚಿನ ಸಮಯದಲ್ಲಿ ಮಾರಾಟ ಮಾಡುತ್ತಿದ್ದದಕ್ಕೆ ಪುರಸಭೆಯ ಅಧಿಕಾರಿಗಳು ದಂಡ ವಿಧಿಸಿದ ಘಟನೆ ಬುಧವಾರ ನಡೆದಿದೆ.
ಅವಕಾಶ ನೀಡಿರುವ ಅಂಗಡಿಗಳಿಗೆ ಜನರು ತಮಗೆ ಬೇಕಾದ ವಸ್ತುಗಳ ಖರೀದಿಗೆ ಬೆಳಿಗ್ಗೆಯಿಂದಲೇ ಬಂದಿದ್ದು ಬಲು ರಭಸದಿಂದ ವ್ಯವಹಾರಗಳು ನಡೆಯುತ್ತಿದ್ದವು. ೯.೪೫ರ ವೇಳೆಗೆ ಪೊಲೀಸ್ ಅಧಿಕಾರಿಗಳು ಮತ್ತು ಪುರಸಭೆಯವರು ೧೦ಗಂಟೆಯೊಳಗೆ ಅಂಗಡಿಗಳನ್ನು ಬಂದ್ ಮಾಡಿ ವ್ಯವಹಾರವನ್ನು ನಿಲ್ಲಿಸುವಂತೆ ಮೈಕ್‌ನಲ್ಲಿ ಅನೌನ್ಸ್‌ಮೆಂಟ್ ಮಾಡುತ್ತಿದ್ದಂತೆ ಹೆಚ್ಚಿನ ಅಂಗಡಿ ಮಾಲಕರುಗಳು ವ್ಯವಹಾರವನ್ನು ನಿಲ್ಲಿಸಿ ಬಾಗಿಲು ಮುಚ್ಚಲು ಪ್ರಾರಂಭಿಸಿದ್ದಲ್ಲದೆ ಪೇಟೆಯಲ್ಲಿ ಖರೀದಿಗಾಗಿ ಬಂದಿದ್ದ ಜನರೂ ಕೂಡಾ ಮನೆಯತ್ತ ತೆರಳಲು ಆರಂಭಿಸಿದರು. ಆದರೆ ಮೂಡುಬಿದಿರೆಯ ಖಾಸಗಿ ಬಸ್ಸು ನಿಲ್ದಾಣದ ಬಳಿಯಿದ್ದ ೨ ಹಣ್ಣು ಹಂಪಲು ಸಹಿತ ತರಕಾರಿ ಅಂಗಡಿಗಳು ಸಮಯ ಮೀರಿ ತೆರೆದಿರುವುದಕ್ಕೆ ಪುರಸಭೆಯ ಅಧಿಕಾರಿಗಳು ತಲಾ ರೂ ೫೦೦ರಂತೆ ದಂಡ ವಿಧಿಸಿ ಅಮಗಡಿಗಳನ್ನು ಮುಚ್ಚಿಸಿದ್ದಾರೆ.
ಉಳಿದಂತೆ ಎಲ್ಲಾ ಅಂಗಡಿ ಮಾಲ್ ಗಳನ್ನು ಬಂದ್ ಮಾಡಿ ಸಹಕಾರ ನೀಡಿದರು. ಬೆಳಗ್ಗಿನ ವೇಳೆ
ವಾಹನಗಳ ಮತ್ತು ಜನ ದಟ್ಟಣೆ ಅಧಿಕವಾಗಿದ್ದರೂ ಮತ್ತೆ ಕಡಿಮೆಯಾಗಿ ನಿಶಬ್ಧ ವಾತಾವರಣ ಏರ್ಪಟಿತ್ತು. ಇದ್ದಲ್ಲದೆ ಪೊಲೀಸ್ ಸಹಿತ ಹೋಂಗಾರ್ಡ್ಸ್ ಸಿಬಂದಿಗಳು ರಸ್ತೆಗಳಲ್ಲಿ ಓಡಾಡುತ್ತಿದ್ದ ವಾಹನಗಳ ತಪಾಸಣೆಯನ್ನು ಮಾಡುತ್ತಿದ್ದುದು ಕಂಡು ಬಂತು.