ಮೂಡಲಪಾಯ ಯಕ್ಷಗಾನದ ಬಗ್ಗೆ ಯುವಜನರ ಆಸಕ್ತಿ ಅಗತ್ಯ

ತುಮಕೂರು, ನ. ೨೦- ಮೂಡಲಪಾಯ ಅಪಾರ ಶಕ್ತಿಯಿರುವಂತಹ ಕಲೆ. ಪಡುವಲಪಾಯದಂತೆ ಸಾಮಾಜಿಕ ಪ್ರತಿಷ್ಠೆ ತರಬೇಕು. ಸಾಮಾಜಿಕ ಮನ್ನಣೆ ಇಲ್ಲದೇ ಇರುವುದರಿಂದ ಇಂದಿನ ವಿದ್ಯಾರ್ಥಿಗಳು, ಯುವ ಸಮುದಾಯ ಈ ಕಲೆಯ ಕಲಿಕೆಯಲ್ಲಿ ಆಸಕ್ತಿ ವಹಿಸುತ್ತಿಲ್ಲ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ.ಎಂ.ಎ ಹೆಗಡೆ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ೨೦೧೯ ನೇ ಸಾಲಿನ ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಕ್ಷಗಾನ ಪ್ರಕಾರಗಳಲ್ಲಿ ಮೂಡಲಪಾಯ ಭಿನ್ನ ರೀತಿಯಲ್ಲಿ ಗುರುತಿಸುವಂತೆ ಮಾಡಬೇಕು. ಯುವಕರಿಗೆ ಈ ಕಲೆಯು ಸಾಮಾಜಿಕ ಅಶಿಸ್ತು ಇಲ್ಲದ ಕಲೆಯೆಂದು ತಿಳಿಸುವ ಪ್ರಯತ್ನ ಮಾಡಬೇಕು ಎಂದರು.
ಈ ಕಲೆಯ ಬಗ್ಗೆ ಯೋಚನೆ ಕ್ರಮಬದ್ದವಾಗಿ ಮುಂದುವರೆದಾಗ ಮೂಡಲಪಾಯ ಸತ್ವ, ಸಮೃದ್ಧವಾದ ಕಲೆ ಎಂಬುದನ್ನಾಗಿ ಸಮಾಜಕ್ಕೆ ತೋರಿಸಬಹುದು. ನಮ್ಮನ್ನಾಳುವವರಿಗೆ ನಮ್ಮ ಕಲೆಯ ಅರ್ಥವಾಗದೇ, ಕಲೆಗೆ ಸಿಗಬೇಕಾದ ಪ್ರೋತ್ಸಾಹ ಸಿಗದೇ ಹೋಗಿದೆ. ಮೂಡಲಪಾಯ ೧೪ ಜಿಲ್ಲೆಗಳಲ್ಲಿದೆ. ಆದರೆ ಪಡುವಲಪಾಯದಂತೆ ಯಾವುದೇ ಶಾಸಕರು ವೇಷ ಹಾಕಿಲ್ಲ, ರಾಜಕಾರಣಿಗಳು, ಸಾಮಾಜಿಕ ಮುಖಂಡರಿಗೆ ಮೂಡಲಪಾಯದ ಮಹತ್ವವನ್ನು ತಿಳಿಸಿಕೊಡಬೇಕು ಎಂದರು.
ಆರಂಭದಲ್ಲಿ ಪಡುವಲಪಾಯ ಯಕ್ಷಗಾನ ಪ್ರಕಾರವು ಇಂತಹದ್ದೇ ಸಮಸ್ಯೆಯನ್ನು ಎದುರಿಸಿತ್ತು. ಅಲ್ಲಿಯ ಜನ ಕಲೆಯನ್ನು ತನ್ನದು ಎಂದು ಸ್ವೀಕರಿಸಿದ್ದರು, ಪ್ರತಿ ಮನೆಯ ಕಾರ್ಯಗಳಲ್ಲಿ ಪಡುವಲಪಾಯ ಆಟ ಇದ್ದೇ ಇರುವುದರಿಂದ ಪಡುವಲಪಾಯ ಮಹತ್ವದ್ದಾಗಿ ಗುರುತಿಸಿಕೊಂಡಿದೆ. ಈಗ ಪಡುವಲಪಾಯ ಬಣ್ಣ ಹಚ್ಚುವುದು ಒಂದು ಪ್ರತಿಷ್ಟೆಯ ವಿಷಯವಾಗಿದೆ. ಕಲಿಯುವ ಜನರಿಗೆ ಪ್ರೇರಣೆ ಸಿಗಬೇಕು. ಜನ ಈ ಕಲೆಯನ್ನು ತನ್ನದು ಎಂದು ಸ್ವೀಕಾರ ಮಾಡಿದಾಗ ಮಾತ್ರ ಕಲೆ ಉಳಿಯಲು ಸಾಧ್ಯ. ಕಲೆಯಿಂದ ಬದುಕುತ್ತೇವೆ ಎಂಬ ಭರವಸೆ ಇಲ್ಲದೇ ಹೋದರೆ ಯಾರು ಆ ಕಲೆಯನ್ನು ಕಲಿಯುವುದಿಲ್ಲ ಎಂದರು.
ಕಲೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಕನ್ನಡ ಸಂಸ್ಕೃತಿ ಇಲಾಖೆಯು ಸದಾ ಕಲಾವಿದರ ಪರವಾಗಿ ಇರುತ್ತದೆ. ಇಲಾಖೆಯು ಯಾವುದೇ ಸಲಹೆ ಸೂಚನೆಗಳನ್ನು ಸ್ವಾಗತಿಸುತ್ತದೆ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಮಾತನಾಡಿ, ಯುವ ಜನಾಂಗಕ್ಕೆ ಪ್ರೋತ್ಸಾಹ ನೀಡದ್ದಷ್ಡು ಅವರು ಕಲೆಯಲ್ಲಿ ಮುಂದುವರೆಯುತ್ತಾರೆ. ಮೂಡಲಪಾಯಕ್ಕೆ ಆಧುನಿಕ ಸ್ಪರ್ಶವನ್ನು ನೀಡಿ ಮುಂದುವರೆಸುವುದು ಅಗತ್ಯವಾಗಿದೆ. ಬದಲಾವಣೆಗೆ ಮನಸ್ಸು ಒಪ್ಪದಿದ್ದಲ್ಲಿ ಮುಂದುವರೆಯುವುದಕ್ಕೆ ಸಾಧ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಕಲೆಗೆ ಸೇವೆ ಸಲ್ಲಿಸಿದ ಡಾ.ಆನಂದರಾಮಉಪಾಧ್ಯ, ಕೆ.ಸಿ.ನಾರಾಯಣ, ಡಾ.ಚಂದ್ರು ಕಾಳೇನಹಳ್ಳಿ ಇವರಿಗೆ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಬಿ.ರಾಜಣ್ಣ, ಎ.ಜಿ. ಅಶ್ವತ್ಥ್‌ನಾರಾಯಣ ಅವರಿಗೆ ಯಕ್ಷಸಿರಿ ಪ್ರಶಸ್ತಿ ಮತ್ತು ಡಾ.ಚಿಕ್ಕಣ್ಣಯಣ್ಣೆಕಟ್ಟೆ.ಅವರಿಗೆ ಪುಸ್ತಕ ಬಹುಮಾನ ನೀಡಲಾಯಿತು.