ಮೂಗು ಮುಚ್ಚಿಕೊಂಡೇ ಇಲ್ಲಿಗೆ ಬನ್ನಿ !!

ಕಲಬುರಗಿ ಜು 27: ನಗರದ ಹೊಸ ಜೇವರಗಿ ರಸ್ತೆ ರಾಮಮಂದಿರ ವೃತ್ತದ ಬಳಿ ಇರುವ ಮರಗಮ್ಮ ದೇವಸ್ಥಾನದ ಸುತ್ತಲಿನ ಖಾಲಿ ನಿವೇಶನಗಳ ಜಾಗದಲ್ಲಿ ನರಕಸದೃಶ ವಾತಾವರಣ ನಿರ್ಮಾಣವಾಗಿದೆ.
ಇಲ್ಲಿ ಎಷ್ಟೋ ವರ್ಷಗಳಿಂದ ಶೇಖರಣೆ ಆದ ಹೊಲಸಿನಿಂದ ಸುತ್ತಲಿನ ಪರಿಸರಕ್ಕೆ ತೊಂದರೆಯಾಗುತ್ತಿದೆ. ಇಲ್ಲಿನ ದುರ್ನಾತ ಮುಖ್ಯ ರಸ್ತೆಯವರೆಗೆ ಬರುತ್ತಿದ್ದು ಅಲ್ಲಿ ಓಡಾಡಲು ಸಹ ಕಷ್ಟವಾಗುತ್ತಿದೆ.
ಇಷ್ಟಾದರೂ ಸಾರ್ವಜನಿಕರು ಇಲ್ಲಿ ಮಲಮೂತ್ರಾದಿ ಮಾಡುವದು,ತ್ಯಾಜ್ಯ ವಸ್ತುಗಳನ್ನು ತಂದು ಸುರಿಯುವದನ್ನು ನಿರಂತರವಾಗಿ ಮುಂದುವರೆಸಿದ್ದಾರೆ. ದೇವಸ್ಥಾನದ ಪರಿಸರ ಹಂದಿ, ನಾಯಿಗಳ ಆಗರವಾಗಿ ಮಾರ್ಪಾಟಾಗಿದೆ ಎಂದು ಸಂಜೀವ ಸಿರನೂರಕರ್ ಅವರು ಸಾಮಾಜಿಕ ಜಾಲತಾಣದ ಮೂಲಕ ಸಂಬಂಧಪಟ್ಟವರ ಗಮನ ಸೆಳೆದಿದ್ದಾರೆ.
ಇದನ್ನು ಹೀಗೇ ಬಿಟ್ಟರೆ ಅನೇಕ ಸಾಂಕ್ರಾಮಿಕ ರೋಗಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ. ಆ ಕೊಳಚೆಯನ್ನು ಸ್ವಚ್ಛಗೊಳಿಸಲು ಸಂಬಂಧಪಟ್ಟ ಇಲಾಖೆಯವರು ಕೂಡಲೇ ಜಾಗೃತರಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.