ಮೂಗು ಕಟ್ಟಿದೆಯೇ…

ಶೀತದಿಂದ ಮೂಗು ಕಟ್ಟಿದರೆ ಸರಿಯಾಗಿ ಉಸಿರಾಡಲು ಆಗುವುದಿಲ್ಲ, ಬಾಯಿಯಿಂದಲೇ ಉಸಿರಾಡಬೇಕಾಗುವುದು, ಅದರಲ್ಲೂ ನಿದ್ದೆ ಮಾಡುವಾಗಂತೂ ತುಂಬಾ ತೊಂದರೆ ಉಂಟಾಗುತ್ತದೆ. ಶೀತವಾದಾಗ ಮೂಗಿನ ನರಗಳು ಊದಿಕೊಳ್ಳುವುದರಿಂದ ಮೂಗು ಕಟ್ಟಿದ ಅನುಭವ ಉಂಟಾಗುವುದು. ಕೆಲವರಿಗಂತೂ ಮೂಗು ಕಟ್ಟಿದ ಅನುಭವದ ಜೊತೆಗೆ ವಿಪರಿತ ಸೋರುವುದು. ಈ ರೀತಿಯಾದರೆಯಂತೂ ಯಾವುದೇ ಕೆಲಸಕ್ಕೆ ಗಮನ ಹರಿಸಲು ಸಾಧ್ಯವಾಗದೆ ಒದ್ದಾಡುವಂತಾಗುವುದು. ಮೂಗು ಕಟ್ಟಿದರೆ ಅದನ್ನು ಹೋಗಲಾಡಿಸಲು ಇವುಗಳನ್ನು ಪಾಲಿಸಿದರೆ ಸರಾಗವಾಗಿ ಉಸಿರಾಡಬಹುದು ಹಾಗೂ ಶೀತ ಕೂಡ ಕಮ್ಮಿಯಾಗುತ್ತದೆ.
ಶೀತವಾದಾಗ ಶುಂಠಿ, ಏಲಕ್ಕಿ ಹಾಕಿದ ಟೀ ಮಾಡಿ ಕುಡಿದರೆ ಊದಿದ ಮೂಗಿನ ನರಗಳನ್ನು ಚಿಕ್ಕದಾಗಿಸುತ್ತದೆ. ಶುಂಠಿ ಟೀಯಲ್ಲದೆ ಇತರ ಹರ್ಬಲ್ ಟೀ ಕುಡಿದರೂ ಶೀತ ಕಮ್ಮಿಯಾಗಿ ಉಸಿರಾಟಕ್ಕೆ ಸಹಾಯ ಮಾಡುವುದು.
2 ಗ್ಲಾಸ್ ಬಿಸಿ ನೀರಿಗೆ 1 ಚಮಚ ಉಪ್ಪು ಹಾಕಿ ಮಿಕ್ಸ್ ಮಾಡಿ ಅದನ್ನು ನಿಧಾನಕ್ಕೆ ಮೂಗಿನ ಮೇಲೆ ಸುರಿದರೆ ಕಟ್ಟಿದ ಮೂಗು ಸರಿಯಾಗುವುದು.
ಶೀತವನ್ನು ಹೋಗಲಾಡಿಸುವಲ್ಲಿ ಟೊಮೆಟೊ ಸೂಪ್ ತುಂಬಾ ಪರಿಣಾಮಕಾರಿ. ಬೆಳ್ಳುಳ್ಳಿ, ನಿಂಬೆ ರಸ, ಕರಿ ಮೆಣಸಿನ ಪುಡಿ ಹಾಕಿ ಮಾಡಿದ ಟೊಮೆಟೊ ಸೂಪ್ ಕುಡಿದರೆ ಉಸಿರಾಟದ ತೊಂದರೆಯಿಂದ ಮುಕ್ತಿ ಹೊಂದಬಹುದು. ಶೀತವಾದರೆ ರಾತ್ರಿ ಮಲಗುವ ಮುನ್ನ ಈ ಸೂಪ್ ಕುಡಿದು ಮಲಗಿದರೆ ನಿದ್ದೆ ಚೆನ್ನಾಗಿ ಬರುತ್ತದೆ.