ಮೂಕನಾಗಬೇಕು ಕಿರುಚಿತ್ರದ ಟೀಸರ್ ಬಿಡುಗಡೆ

ಕಲಬುರಗಿ,ಜು.30: ತತ್ವ ಪದಕಾರ ಕಡಕೋಳ್ ಮಡಿವಾಳಪ್ಪನವರ ಜೀವನ ಹಾಗೂ ಸಾಧನೆಗಳನ್ನು ತಿಳಿಸುವ ನಿಟ್ಟಿನಲ್ಲಿ ತಯಾರಿಸಲಾದ ಮೂಕನಾಗಬೇಕು ಎಂಬ ಕಿರುಚಿತ್ರವನ್ನು ಆಗಸ್ಟ್ ಮೊದಲ ವಾರದಲ್ಲಿ ದೂರದರ್ಶನ ಚಂದನ್ ವಾಹಿನಿಯಲ್ಲಿ ಹಾಗೂ ವಿಜಯಪುರದ ಪ್ರಿನ್ಸ್ ಟಿವಿ ಕೇಬಲ್ ವಾಹಿನಿಯಲ್ಲಿ ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವುದು ಎಂದು ಕಿರುಚಿತ್ರ ನಿರ್ದೇಶಕ ಶಿವಾನಂದ್ ಹಿರೇಮಠ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 40 ನಿಮಿಷಗಳ ಈ ಕಿರುಚಿತ್ರದ ಚಿತ್ರೀಕರಣವನ್ನು ಕಡಕೋಳ್, ಆಲಮೇಲ್, ವಿಜಯಪುರಗಳಲ್ಲಿ ಮಾಡಲಾಗಿದೆ. ಸುಮಾರು 15 ದಿನಗಳಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಲಾಗಿದೆ ಎಂದರು.
ಮುಖ್ಯ ಪಾತ್ರದಲ್ಲಿ ಸಂತೋಷ್ ಉಪ್ಪಿನ್, ಸುಕನ್ಯಾ, ರಾಧಿಕಾ, ರವಿ ಖಾನಾಪುರ, ರಾಜೇಶ್ವರಿ ಪಾಟೀಲ್, ವರಲಕ್ಷ್ಮೀ, ಪೂನಂ ಗಾಯಕವಾಡ್, ಭಾಗಣ್ಣ ಚಳ್ಳಗಿ, ಅರುಣಾ ಬಾಲ, ಮಡಿವಾಳನ ಪಾತ್ರದಲ್ಲಿ ಸಿದ್ಧರಾಮಯ್ಯ ಹಿರೇಮಠ್ ಅವರು ನಟಿಸಿದ್ದಾರೆ. ಹಣದ ಮುಗ್ಗಟ್ಟಿನಿಂದಾಗಿ ಕಿರುಚಿತ್ರದ ಚಿತ್ರೀಕರಣ ಮಧ್ಯದಲ್ಲಿ ನಿಲ್ಲುವ ಹಂತಕ್ಕೆ ಬಂದಾಗ ಬಾಗಲಕೋಟೆಯ ಬಿಜೆಪಿ ಮುಖಂಡ ಡಾ. ರಾಜು ನಾಯ್ಕರ್ ಅವರು ಹಣ ಹೂಡಿಕೆ ಮಾಡಿದರು. ಹೀಗಾಗಿ ಚಿತ್ರೀಕರಣ ಪೂರ್ಣಗೊಂಡು ಉತ್ತಮವಾಗಿ ಮೂಡಿ ಬಂದಿದೆ. ಒಟಿಟಿ ಮೂಲಕವೂ ಕಿರುಚಿತ್ರವನ್ನು ಜನರಿಗೆ ತಲುಪಿಸುವ ಯೋಜನೆ ಇದೆ. ಈ ಸಂಬಂಧ ಮಾತುಕತೆ ನಡೆದಿದೆ ಎಂದು ಅವರು ಹೇಳಿದರು.
ಮೂಕನಾಗಬೇಕು ಕಿರುಚಿತ್ರದ ಟೀಸರ್ ಬಿಡುಗಡೆ ಮಾಡಿದ ಪತ್ರಕರ್ತ ಹಾಗೂ ಸಾಹಿತಿ ಮತ್ತು ಕಿರುಚಿತ್ರ ಕಲಾವಿದ ಮಹಿಪಾಲರೆಡ್ಡಿ ಮುನ್ನೂರ್ ಅವರು ಮಾತನಾಡಿ, ಉತ್ತರ ಕರ್ನಾಟಕದ ಯುವ ಪ್ರತಿಭೆಗಳನ್ನು ಬಳಸಿಕೊಂಡು ಈ ಕಿರು ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಆ ಮೂಲಕ ಈ ಭಾಗದ ಮಹಾಪುರುಷರ ಜೀವನ, ತತ್ವಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಶ್ಲಾಘಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ 110ಕ್ಕೂ ಅಧಿಕ ಜನ ತೊಡಗಿಸಿಕೊಂಡಿದ್ದಾರೆ. ಅವರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಇಂತಹ ಪ್ರಯತ್ನಗಳು ನಡೆಯಬೇಕು ಎಂದು ಅವರು ಆಶಿಸಿದರು.
ಕಿರು ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ ಸಂತೋಷ್ ಉಪ್ಪಿನ್ ಅವರು ಮಾತನಾಡಿ, ಕಳೆದ 22 ವರ್ಷಗಳಿಂದ ಚಿತ್ರರಂಗದಲ್ಲಿದ್ದು, ನಾಟಕ, ಮೆಗಾ ಧಾರವಾಹಿ ಹಾಗೂ ಆರು ಚಲನಚಿತ್ರಗಳಲ್ಲಿ ನಟಿಸಿದ್ದೇನೆ. ಕಡಕೋಳ್ ಮಡಿವಾಳಪ್ಪನವರ ಜೀವನ ಚರಿತ್ರೆಯನ್ನು ಕೆಳಿದ ಬಳಿಕ ಉತ್ತಮ ಅವಕಾಶವೆಂದು ಭಾವಿಸಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಟಿ ಸುಕನ್ಯಾ ಹಾಗೂ ಸೂಕಿ ತಂಡದ ಮುಖ್ಯಸ್ಥ ಕಿರಣ್ ಪಾಟೀಲ್ ಅವರು ಉಪಸ್ಥಿತರಿದ್ದರು.