ಮುಸ್ಲೀಮರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ : ವೃತ್ತ ನಿರೀಕ್ಷಕ ರಾಘವೇಂದ್ರ


ಹಿರಿಯೂರು.ನ.೧೭: ಮುಸ್ಲೀಂ ಸಮುದಾಯದ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದು ವೃತ್ತ ನಿರೀಕ್ಷಕ ರಾಘವೇಂದ್ರ ಕರೆ ನೀಡಿದರು. ನಗರದ ರೋಟರಿ ಸಭಾ ಭವನದಲ್ಲಿ ತಾಲೂಕು ಮುಸ್ಲಿಂ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎ.ಪಿ.ಜೆ ಅಬ್ದುಲ್ ಕಲಾಂ ಎಲ್ಲರಿಗೂ ಮಾದರಿಯಾಗಿದ್ದಾರೆ ಅವರಂತೆ ಇಂದಿನ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಿ ಎಂದು ಹೇಳಿದರು.

ಸಂಘದ ಅಧ್ಯಕ್ಷರಾದ ಸೈಯದ್ ನಯಾಜ್ ಅಹಮ್ಮದ್ ರವರು ಮಾತನಾಡಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ, ಹಜ್ ಯಾತ್ರಿಕರಿಗೆ ತರಬೇತಿಶಿಬಿರ , ರಕ್ತದ ಗುಂಪು ತಪಾಸಣ ಶಿಬಿರ ಕಾರ್ಯಕ್ರಮ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಧನ ಸಹಾಯ ಮತ್ತು ಪ್ರೋತ್ಸಾಹ ಇನ್ನಿತರೆ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ ಎಂದು ಹೇಳಿದರು. ನಗರಸಭೆ ಅಧ್ಯಕ್ಷರಾದ ಶಂಶುನ್ನೀಸಾ ರವರು ಮಾತನಾಡಿ ಶಿಕ್ಷಣವೇ ಶಕ್ತಿ ಮುಸ್ಲಿಂ ಸುಮುದಾಯದ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು ಹಾಗೂ ಪುಸ್ತಕಗಳನ್ನು ಪ್ರೀತಿಸಿ ಉತ್ಸಾಹದಿಂದ ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಹೇಳಿದರು. ನಗರಸಭೆ ಉಪಾಧ್ಯಕ್ಷ ಬಿ.ಎನ್.ಪ್ರಕಾಶ್, ಲೈಫ್ ಲೈನ್ ಫೌಂಡೇಶನ್ ನ ಶಫಿಉಲ್ಲಾ, ಅಬಕಾರಿ ಅಧಿಕಾರಿ ಮುದಾಸಿರ್ ಅಹಮ್ಮದ್, ಮಸೀದಿ ಗುರುಗಳಾದ ಸಿಗಬತ್‌ಉಲ್ಲಾ, ಫಿಸರ್ ಮೌಲಾನ, ಎಂ.ಆರ್.ಅಮೃತಲಕ್ಷ್ಮಿ, ಸೈದಾ ಆಸಿಯಾ, ತಸ್ಮೀನ್ ಮತ್ತಿತರರು ಮಾತನಾಡಿದರು. ನಗರಸಭೆ ಸದಸ್ಯರಾದ ಇಂತಿಯಾಜ್, ಸಮೀಉವಲ್ಲಾ, ಸಂಘದ ಕಾರ್ಯದರ್ಶಿ ಶಫಾಯತ್‌ವುಲ್ಲಾ ಶರೀಫ್, ಖಜಾಂಚಿ ಸಿಲಾರ್ ಸಾಬ್, ಪಿ.ಎಂ.ಹಿದಾಯತ್‌ವುಲ್ಲಾ, ಹಬೀಬ್‌ಖಾನ್, ಹಸೇನ್‌ಬಾಷ, ಸೈಯದ್‌ಸಾಬ್, ಖುದರತ್‌ಉಲ್ಲಾ ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ನೌಕರರು, ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.