
ರಾಯಚೂರು, ಮಾ.೨೫- ರಾಜ್ಯದಲ್ಲಿ ಸುಮಾರು ೧೪.೨ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಂ ಅಲ್ಪಸಂಖ್ಯಾತರು ರಾಜ್ಯದಲ್ಲಿ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಮೀಸಲಾತಿಯಂತೆ ೨ಬಿ ಕ್ಯಾಟೆಗಾರಿಯಲ್ಲಿ ಶೇ ೪ರಷ್ಟು ಮೀಸಲಾತಿಯನ್ನು ೧೯೯೫ ರಲ್ಲಿ ನೀಡಲಾಗಿತ್ತು, ಆದರೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯ ನಿರ್ಣಯದಂತೆ ಮುಸ್ಲಿಂರಿಗಿರುವ ಶೇ ೪ ರ ಮೀಸಲಾತಿಯನ್ನು ರದ್ದುಪಡಿಸಿರುವುದು
ಖಂಡನೀಯ ಕೂಡಲೇ ಈ ನಿರ್ಣಯವನ್ನು ವಾಪಸ್ ಪಡೆಯಬೇಕು ಎಂದು ಅಂಜುಮನ್ – ಎ – ರಾಯಚೂರು ಸಂಚಾಲಕ ರಝಾಕ್ ಉಸ್ತಾದ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,
ಸರಕಾರದ ನಿರ್ಣಯವು ಬಡ ಮುಸ್ಲಿಂರ ಬೆಳವಣಿಗೆಗೆ ಅಡ್ಡಿಯಾಗಿದೆಯಲ್ಲದೇ ಭವಿಷ್ಯವು ಮಂಕಾಗುವಂತೆ ಮಾಡಿದೆ. ಈ ನಿರ್ಣಯ ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅತ್ಯಂತ ಅಮಾನವೀಯ, ಸಂವೇಧನಶೀಲತೆ ಇರದ, ದುರ್ಬಲ ಮುಖ್ಯಮಂತ್ರಿಯೆಂದು ಇತಿಹಾಸದಲ್ಲಿ ದಾಖಲಾಗಲಿದೆ ಎಂದರು.
ದೇಶದಲ್ಲಿ ೨೦೧೧ರ ಜನಗಣತಿಯಂತೆ ೧೩.೮ ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದರುವ ಬಗ್ಗೆ ಕೇಂದ್ರ ಸರಕಾರಗಳು ರಚಿಸಿದ ಹಲವು ಸಮಿತಿಗಳು ವಿವರವಾದ ವರದಿಗಳನ್ನು ನೀಡಲಾಗಿದೆ, ಅದರಲ್ಲಿ ವಿಶೇಷವಾಗಿ ನ್ಯಾ.ರಾಜೇಂದ್ರ ಸಾಚಾರ ಸಮಿತಿ ಹಾಗೂ ನ್ಯಾ.ರಂಗನಾಥ ಮಿಶ್ರಾ ಆಯೋಗ ನೀಡಿರುವ ವರದಿಗಳು ಪ್ರಮುಖವಾಗಿವೆ, ದೇಶದಲ್ಲಿ ಅತೀ ಕೆಳಮಟ್ಟದ ಜೀವನ ನಡೆಸುತ್ತಿರುವ ಸಮುದಾಯಗಳ ಸಾಲಿನಲ್ಲಿ ಮೊದಲಿಗೆ ನಿಲ್ಲುವದೇ ಮುಸ್ಲಿಂ ಸಮುದಾಯವಾಗಿದೆ, ಅಲ್ಲದೇ ಶೈಕ್ಷಣಿಕವಾಗಿ ಅತೀ ಕಡಿಮೆ ಸಾಕ್ಷರತೆ ಹೊಂದಿರುವದು ಮತ್ತು ಶಾಲೆ ಬಿಡುವ ಮಕ್ಕಳ ಸಂಖ್ಯೆ ಅತಿ ಹೆಚ್ಚು ಇದೇ ಸಮುದಾಯದಿಂದ ಇರುವದು ವರದಿಯಾಗಿದೆ. ಸರಕಾರಿ ಸೌಮ್ಯದ ನೌಕರಿಗಳಲ್ಲಿ ಅತೀ ಕಡಿಮೆ ಜನರಿಗೆ ಅವಕಾಶ ಸಿಕ್ಕಿರುವದು ಸಹ ಮುಸ್ಲಿಂ ಸಮುದಾಯವೆಂದೇ ಹೇಳಲಾಗಿದೆ. ನ್ಯಾ.ರಂಗನಾಥ ಮಿಶ್ರಾ ಆಯೋಗ ನೀಡಿರುವ ವರದಿಯಂತೆ ಅಲ್ಪಸಂಖ್ಯಾತರಿಗೆ ಶೇ ೧೫ ರಷ್ಟು ಮೀಸಲಾತಿ ನೀಡಬೇಕು ಅದರಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ ೧೦ ರಷ್ಟು ಮೀಸಲಾತಿ ನೀಡಿಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಅದೇ ರೀತಿ ನ್ಯಾ.ರಾಜೇಂದ್ರ ಸಾಚಾರ ಸಮಿತಿಯ ವರದಿಯು ಸಹ ಇದನ್ನೇ ಉಲ್ಲೇಖಿಸಿದೆ.
ಸರಕಾರವು ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲವೆಂದು ಸುಳ್ಳು ಹೇಳುತ್ತಿರುವದು ಹಾಸ್ಯಾಸ್ಪದವಾಗಿದೆ ಎಂದರು.
ಸಂವಿಧಾನದ ಅನುಚ್ಛೇಧ ೧೫(೪) ಹಾಗೂ ೧೬(೪)ರಲ್ಲಿ ಉಲ್ಲೇಖಿಸಲಾದ ಮೀಸಲಾತಿಯ ಅಂಶವು ದೇಶದಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ದೇಶದ ನಾಗರೀಕರಿಗೆ ಮೀಸಲಾತಿ ನೀಡಬಹುದಾಗಿದೆ ಎಂದು ಹೇಳಲಾಗಿದೆ, ಇದರಲ್ಲಿ ಎಲ್ಲಿಯೂ ಯಾವ ಜಾತಿಗೆ, ಯಾವ ಸಮುದಾಯಕ್ಕೆ, ಯಾವ ಧರ್ಮಕ್ಕೆ ನೀಡಬೇಕೆನ್ನುವದಿಲ್ಲ ಎನ್ನುವದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.
ಸರಕಾರ ಈಗ ತೆಗೆದುಕೊಂಡಿರುವ ಮೀಸಲಾತಿ ರದ್ದತಿ ನಿರ್ಣಯವು ದ್ವೇಶದಿಂದ ಕೂಡಿದ್ದು, ಈ ಸಮುದಾಯ ಬಿಜೆಪಿ ಪಕ್ಷಕ್ಕೆ ಮತದಾನ ಮಾಡುವದಿಲ್ಲ ಎನ್ನುವ ಏಕೈಕ ಕಾರಣದಿಂದ ಮಾಡಲಾಗಿದೆ ಎನ್ನುವದು ಸ್ಪಷ್ಟವಾಗಿದೆ, ಈಗಾಗಲೇ ಈ ಸಮುದಾಯ ಏನನ್ನು ತಿನ್ನಬೇಕು, ಯಾವ ಬಟ್ಟೆಯನ್ನು ಧರಿಸಬೇಕು, ಎಲ್ಲಿ ವ್ಯಾಪಾರ ಮಾಡಬೇಕು ಇತ್ಯಾದಿ ವಿಷಯಗಳನ್ನು ಮುನ್ನಲೆಗೆ ತಂದು ನಮ್ಮನ್ನು ನಿಯಂತ್ರಿಸಲು ಪ್ರಯತನಿಸಿರುವದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ, ಅದರಂತೆ ಇನ್ನು ಮುಂದೆ ಮುಸ್ಲಿಂ ಸಮುದಾಯ ಸರಳವಾಗಿ ಶಿಕ್ಷಣ ಪಡೆಯಬಾರದು ಮತ್ತು ಸರಳವಾಗಿ ಸರಕಾರಿ ಸೇವೆಗೆ ಸೇರಬಾರದೆನ್ನುವ ಏಕೈಕ ಉದ್ದೇಶದಿಂದ ಈ ನಿರ್ಣಯ ಕೈಗೊಂಡಿರುವದು ಸರ್ವಾಧಿಕಾರಿ ಧೋರಣೆಯ ಪ್ರತೀಕವಾಗಿದೆ.
ಕಾರಣ, ಸರಕಾರ ಸಂವಿಧಾನದ ಆಶಯದಂತೆ ನಡೆಯುತ್ತಿದ್ದಲ್ಲಿ, ರಾಜ್ಯದ ಪ್ರತಿಯೊಬ್ಬ ಪ್ರಜೆಯನ್ನು ಸಮಾನವಾಗಿ ಕಾಣುತ್ತಿದ್ದಲ್ಲಿ ತಕ್ಷಣ ಸದರಿ ನಿರ್ಣಯವನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಬ್ದುಲ್ ಹೈ ಫೆರೋಜ್, ಮೊಹಮ್ಮದ ರಫಿ, ಮೊಹಮ್ಮದ ಫರೀದ ಗೋಗಿ, ಸೈಯದ ಅಮೀನುಲ್ ಹಸನ್ ಇದ್ದರು.