ಮುಸ್ಲಿಮರ ಮೀಸಲಾತಿ ರದ್ದು ಆದೇಶಕ್ಕೆ ತಡೆ

ನವದೆಹಲಿ,ಏ.೨೫:ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮೀಸಲಾತಿ ರದ್ಧತಿಗೆ ಸರ್ವೋಚ್ಛ ನ್ಯಾಯಾಲಯ ಇಂದು ತಡೆಯಾಜ್ಞೆ ನೀಡಿದ್ದು, ಮೇ ೯ರವರೆಗೆ ಈ ಆದೇಶವನ್ನು ಜಾರಿ ಮಾಡದಂತೆ ರಾಜ್ಯಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದೆ.
೨ಬಿ ಅಡಿ ಮುಸ್ಲಿಮರಿಗಿದ್ದ ಶೇ. ೪ರಷ್ಟು ಮೀಸಲಾತಿಯನ್ನು ಬಿಜೆಪಿ ಸರ್ಕಾರದ ಕಡೆಯ ಸಂಪುಟ ಸಭೆಯಲ್ಲಿ ರದ್ದು ಮಾಡಿತ್ತು. ಸರ್ಕಾರದ ನಿಲುವು ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಮುಸ್ಲಿಮರ ಆದೇಶ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಬಿ.ವಿ ನಾಗರತ್ನ ಅವರನ್ನೊಳಗೊಂಡ ದ್ವಿಸದಸ್ಯ ಪೀಠದ ಮುಂದೆ ನಡೆಯುತ್ತಿದೆ.
ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಂಡಿಸಿದ ವಾದವನ್ನು ಆಲಿಸಿದ ನಂತರ ಮುಂದಿನ ವಿಚಾರಣೆಯನ್ನು ನ್ಯಾಯಪೀಠ ಮೇ ೯ಕ್ಕೆ ಮುಂದೂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಿದ್ಧವಾಗಿದೆ. ಆದರೆ, ಸಾಂವಿಧಾನಿಕ ಪೀಠದ ಮುಂದೆ ವಿಚಾರಣೆ ನಡೆಯುತ್ತಿದ್ದು, ಈಗ ಮುಸ್ಲಿಂ ಸಮುದಾಯಕ್ಕೆ ನೀಡಿರುವ ಮೀಸಲಾತಿ ರದ್ದು ಪ್ರಶ್ನಿಸಿ ವಿಚಾರಣೆ ನಡೆಸುತ್ತಿದ್ದು, ಮುಂದಿನ ವಿಚಾರಣೆಯನ್ನು ಮುಂದೂಡಬೇಕು ಎಂದು ರಾಜ್ಯಸರ್ಕಾರದ ಪರ ವಕೀಲರು ಮನವಿ ಮಾಡಿದ್ದರು.
ಹಿರಿಯ ವಕೀಲ ದುಷ್ಯಂತ್ ದುಬೆ ಮುಸ್ಲಿಮರಿಗೆ ನೀಡಲಾಗಿದ್ದ ಶೇ. ೪ರಷ್ಟು ಮೀಸಲಾತಿಯನ್ನು ರದ್ದುಪಡಿಸಿದ ರಾಜ್ಯಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಇದು ಅತ್ಯಂತ ಮಹತ್ತರ ಪ್ರಕರಣವಾಗಿದ್ದು, ಯಾವುದೇ ಕಾರಣಕ್ಕೂ ವಿಚಾರಣೆ ಮುಂದೂಡಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.
ವಾದ-ಪ್ರತಿವಾದ ಆಲಿಸಿದ ನಂತರ ನ್ಯಾಯಪೀಠ ಮೇ ೯ಕ್ಕೆ ವಿಚಾರಣೆ ಮುಂದೂಡಿತು. ಮೀಸಲಾತಿ ರದ್ಧತಿಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಹಳೇ ಆದೇಶ ಮುಂದುವರೆಸುವುದಾಗಿಯೂ ಸುಪ್ರೀಂಕೋರ್ಟ್ ತಿಳಿಸಿದೆ.
ಈ ಹಿಂದೆ ವಿಚಾರಣೆ ವೇಳೆ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಮೀಸಲಾತಿ ರದ್ದು ಮಾಡಿದ್ದ ರಾಜ್ಯಸರ್ಕಾರದ ಕ್ರಮ ದೋಷಪೂರಿತವಾಗಿದೆ ಎಂದು ಸುಪ್ರೀಂಕೋರ್ಟ್ ಛಾಟಿ ಬೀಸಿತ್ತು

ರದ್ಧತಿ ಇಲ್ಲ:ನಾವದಗಿ
ರಾಜ್ಯ ಸರ್ಕಾರ ಮುಸ್ಲಿಮರಿಗೆ ನೀಡಿದ್ದ ೨ಬಿ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿಲ್ಲ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಸ್ಪಷ್ಟ ಪಡಿಸಿದ್ದಾರೆ.
ಮುಸ್ಲಿಮರಿಗೆ ಶೇ.೪ರಷ್ಟು ಒಬಿಸಿ ಮೀಸಲಾತಿಯನ್ನು ರದ್ದುಗೊಳಿಸಿದ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಯನ್ನು ಸುಪ್ರೀಂ ಕೋರ್ಟ್ ಮೇ ೯ಕ್ಕೆ ಮುಂದೂಡಿದೆ ಎಂದು ಅವರು ಹೇಳಿದ್ದಾರೆ.
ಮೀಸಲಾತಿ ಆಧಾರದ ಮೇಲೆ ಯಾವುದೇ ಪ್ರವೇಶ ಅಥವಾ ನೇಮಕಾತಿಗಳು ಮಾಡುವುದಿಲ್ಲ ಎಂದು ಕರ್ನಾಟಕ ಸರ್ಕಾರ ಮತ್ತೊಮ್ಮೆ ಭರವಸೆ ನೀಡಿದೆ ಎಂದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಎಜಿ ಪ್ರಭುಲಿಂಗ ನಾವದಗಿ, ಈ ಹಿಂದೆ ಸರ್ಕಾರವೇ ಭರವಸೆಯಂತೆ ಮುಂದಿನ ವಿಚಾರಣೆ ವರೆಗೆ ನೇಮಕಾತಿ ಮಾಡುವಂತಿಲ್ಲ ಎಂದು ಹೇಳಿದೆ. ಆದರೆ ಮೀಸಲಾತಿಗೆ ತಡೆಯಾಜ್ಞೆ ನೀಡಿಲ್ಲ ಎಂದು ಹೇಳಿದ್ದಾರೆ.
ಮುಸ್ಲಿಮರಿಗೆ ಒಬಿಸಿ ವರ್ಗದಲ್ಲಿ ನೀಡಲಾಗುತ್ತಿದ್ದ ಶೇ ೪ರ ಮೀಸಲಾತಿಯನ್ನು ರದ್ದುಗೊಳಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದೂ ಕೂಡ ಮುಂದುವರಿಸಿದ ವೇಳೆ ಕರ್ನಾಟಕ ಸರ್ಕಾರ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.