ಮುಸ್ಲಿಮರ ಓಲೈಕೆಗೆ ಕೈನಲ್ಲಿ ಪೈಪೋಟಿ

ಅಶೋಕ್ ಕಿಡಿ

ಬೆಂಗಳೂರು, ಜ. ೨೯- ಮುಸ್ಲಿಂರ ಓಲೈಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿಡಿ.ಕೆ. ಶಿವಕುಮಾರ್ ಪೈಪೋಟಿ ನಡೆಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ಈ ಬಗ್ಗೆ ಎಕ್ಸ್ ಮಾಡಿರುವ ಅವರು, ಮೊನ್ನೆ ತಾನೆ ರಾಜ್ಯದಲ್ಲಿ ಮುಸ್ಲಿಂ ಪರ ಸರ್ಕಾರ ಇದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದು ಮುಸ್ಲಿಂರ ದಯೆಯಿಂದ ಎಂದು ಹಿಂದೂ ಮತದಾರರಿಗೆ ಅಪಮಾನ ಮಾಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜತೆ ಪೈಪೋಟಿಗೆ ಬಿದ್ದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೊಹಲ್ಲಾ ಅಭಿವೃದ್ಧಿಗೆ ಸಾವಿರ ಕೋಟಿ ರೂ. ನೀಡಲು ಮುಂದಾಗಿದ್ದಾರೆ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ರೈತರಿಗೆ ೨ ಸಾವಿರ ರೂ. ಪರಿಹಾರ ನೀಡಲು ಹಣವಿಲ್ಲ. ಆದರೆ, ಮೊಹಲ್ಲಾಗಳ ಅಭಿವೃದ್ಧಿಗೆ ಸಾವಿರ ಕೋಟಿ ರೂ . ನೀಡಲು ಕಾಂಗ್ರೆಸ್ ಸರ್ಕಾರದ ಬಳಿ ಹಣ ಇದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ, ಮುಸ್ಲಿಂರ ತುಷ್ಟೀಕರಣ ಮಾಡಲು ನಿಮ್ಮ ಕಾಂಗ್ರೆಸ್ ಪಕ್ಷ ಮತ್ತು ನೀವು ಯಾವ ಮಟ್ಟಕ್ಕಾದರೂ ಹೋಗುತ್ತೀರಿ ಎಂಬುದನ್ನು ಪದೇ ಪದೇ ನಿರೂಪಿಸುತ್ತಲೆ ಇದ್ದೀರಿ. ನಿಮ್ಮ ಈ ಓಲೈಕೆ ರಾಜಕಾರಣದಲ್ಲಿ ಜಾತಿ ಮತ ಧರ್ಮದ ಬೇಧವಿಲ್ಲ. ರೈತರನ್ನು ಬಲಿಪಶು ಮಾಡಬೇಡಿ ಎಂದು ಅಶೋಕ್ ಒತ್ತಾಯಿಸಿದ್ದಾರೆ.
ಬರದಿಂದ ರೈತರು ಸಂಕಷ್ಟದಲ್ಲಿದ್ದಾರೆ. ೮೦೦ ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಕ್ಷಾಂತರ ಕೃಷಿ ಕಾರ್ಮಿಕರು ಗುಳೆ ಹೋಗಿದ್ದಾರೆ. ಇಷ್ಟಾದರೂ ತಮ್ಮಕಲ್ಲು ಹೃದಯ ಕರಗಲು ಇನ್ನೇನು ಬೇಕು. ಕೂಡಲೇ ರೈತರ ಖಾತೆಗೆ ಬರ ಪರಿಹಾರದ ಹಣ ಜಮಾ ಮಾಡಿ ಕೈಲಾಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಅಶೋಕ್ ಎಕ್ಸ್‌ನಲ್ಲಿ ಹೇಳಿದ್ದಾರೆ.