ಮುಸ್ಲಿಮರಿಗೆ-ಕ್ರಿಮಿನಲ್‌ಗಳಿಗೆ ಟಿಕೆಟ್

ಶೋಭಾ ಆರೋಪ
ಬೆಂಗಳೂರು,ಏ.೨೦-ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಕ್ರಿಮಿನಲ್‌ಗಳಿಗೆ ಟಿಕೆಟ್ ನೀಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.
ಇದರಿಂದಾಗಿ ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೆ ಓಡಾಡೋಕೆ ಭಯವಾಗುತ್ತಿದೆ ಎಂದು ಹೇಳಿದ್ದಾರೆ.
ಮುಸ್ಲಿಂರಿಗೆ ಸಿದ್ದರಾಮಯ್ಯ, ಕ್ರಿಮಿನಲ್ ಗಳಿಗೆ ಡಿ.ಕೆ. ಶಿವಕುಮಾರ್ ನಾಯಕರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೆ ಓಡಾಡೋಕೆ ಭಯವಾಗುತ್ತಿದೆ. ನಮ್ಮ ಕಾರು ಹೋಗುವಾಗ ಹಿಂದೆಯಿಂದ ಹಸಿರುದ್ವಜ ಹಿಡಿದು ಬರ್ತಾರೆ, ಸಿದ್ದರಾಮಯ್ಯ ಬರ್ತಾರೆ ನಿಮ್ಮನ್ನು ನೋಡಿಕೊಳ್ಳುತ್ತಾರೆ ಅಂತಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗೋಹತ್ಯೆ ಕಾಯ್ದೆಯನ್ನು ಹಿಂಪಡೆಯುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಕೇರಳದಲ್ಲಿ ರಸ್ತೆಯಲ್ಲಿ ಹಸುಗಳನ್ನು ಹತ್ಯೆಗೈದ ರಸೂಲ್ ನನ್ನು ಕಾಂಗ್ರೆಸ್ ಯುವ ಮೊರ್ಚಾ ಅಧ್ಯಕ್ಷನನ್ನಾಗಿ ಮಾಡಿದೆ ಎಂದು ದೂರಿದ್ದಾರೆ
ರಸೂಲ್ ಅಂಥವನ ಜೊತೆಗೆ ಡಿ.ಕೆ.ಶಿವಕುಮಾರ್ ಓಡಾಡುತ್ತಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ೧,೭೦೦ ಪಿಎಫ್‌ಐ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆದಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ದೂರಿದ್ದಾರೆ.