ಮುಸ್ಲಿಂ ಸಮುದಾಯಕ್ಕಿದ್ದ ಮೀಸಲಾತಿಯನ್ನು ಪುನಃ ನೀಡುವಂತೆ ಒತ್ತಾಯ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮಾ,29- ಮುಸ್ಲಿಂ ಸಮುದಾಯಕ್ಕಿದ್ದ 2 (ಬಿ) ಮೀಸಲಾತಿಯನ್ನು ಪುನಃ ನೀಡುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಸಿ ಗ್ರೇಡ್-2 ತಹಶೀಲ್ದಾರ್  ರತ್ನಮ್ಮ ಅವರಿಗೆ ಮನವಿ ಸಲ್ಲಿಸಿದರು.
ತಾ.ಅಧ್ಯಕ್ಷ ಎಸ್.ಶಬ್ಬೀರ್ ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರವು ಸಂಪುಟ ಸಭೆಯಲ್ಲಿ ಮುಸ್ಲಿಂ ಸಮುದಾಯಕ್ಕಿದ್ದ 2(ಬಿ) ಮೀಸಲಾತಿಯನ್ನು ರದ್ದುಪಡಿಸಿರುವುದು ಅಸಂವಿಧಾನಿಕ ಹಾಗೂ ಒಂದು ನಿರ್ಧಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಿರುವ ಉದ್ದೇಶಿತವಾಗಿದೆ. ಸಂವಿಧಾನದಲ್ಲಿ ಧರ್ಮಧಾರಿತ ಮೀಸಲಾತಿ ಇಲ್ಲದಿರುವುದರಿಂದ 2(ಬಿ) ಪ್ರವರ್ಗದಡಿಯಲ್ಲಿ ಇತರೆ ಹಿಂದುಳಿದ ವರ್ಗಗಳಂತೆ ಕರ್ನಾಟಕದ ಮುಸ್ಲಿಂ ಸಮುದಾಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವೆಂದು ವೈಜ್ಞಾನಿಕ ಅಧ್ಯಯನದ ಮೂಲಕ ಗುರುತಿಸಿ 2(ಬಿ) ಮೀಸಲಾತಿ ನೀಡಲಾಗಿತ್ತು.
ಸ್ವಾತಂತ್ರ್ಯ ನಂತರ ಮಾತಗೌಡ ಸಮಿತಿ, ಬೆಂಕಟಸ್ವಾಮಿ ಆಯೋಗ ಮತ್ತು 1990 ರ ಚಿನ್ನಪ್ಪರೆಡ್ಡಿ ಆಯೋಗ ಕೂಡ ಮುಸ್ಲಿಮರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿರುವುದನ್ನು ನಾವು ಕಾಣಬಹುದು. ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ತಡೆಯೊಡ್ಡುವ ಉದ್ದೇಶದಿಂದ ಮೀಸಲಾತಿ ರದ್ದುಪಡಿಸಿರುವುದು ದೃಢವಾಗುತ್ತದೆ.
ಸಂವಿಧಾನದ ಆಶಯಗಳಂತ ಸರ್ಕಾರ ತನ್ನ ಆಡಳಿತ ನಡೆಸಬೇಕೆ ಹೊರತು ತನ್ನ ಗುಪ್ತ ಅಜೆಂಡಾವನ್ನು ಜಾರಿಗೊಳಿಸಲು ಅಲ್ಲ. ಮುಸ್ಲಿಮ್ ಸಮುದಾಯಕ್ಕೆ ನಿಗದಿಯಾಗಿದ್ದ 2(ಬಿ) ಮೀಸಲಾತಿಯನ್ನು ಮರು ಸ್ಥಾಪಿಸಬೇಕೆಂದು ಒತ್ತಾಯಿಸಲಾಗುತ್ತದೆಂದು ತಿಳಿಸಿದರು.