ಮುಸ್ಲಿಂ ಮೀಸಲಾತಿ ರದ್ದು ಹಿಂಪಡೆಯಲು ಒತ್ತಾಯ

ಮಾನ್ವಿ,ಮಾ.೩೦- ತಾಲೂಕಿನ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ಸೇವಾ ಸಂಘವು ತಾಲೂಕ ದಂಡಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸುವುದರ ಮೂಲಕ ರಾಜ್ಯ ಸರ್ಕಾರ ರದ್ದು ಮಾಡಿರುವ ಶೇಕಡಾ ೪% ಮೀಸಲಾತಿಯನ್ನು ಕೂಡಲೇ ಹಿಂಪಡೆಯುವಂತೆ ಉಪಾಧ್ಯಕ್ಷ ಎಂ ಡಿ ಇಸ್ಮಾಯಿಲ್ ಸಾಹುಕಾರ್ ಒತ್ತಾಯ ಮಾಡಿದರು.
ನಂತರ ಸಂಘದ ಪದಾಧಿಕಾರಿಗಳು ಮಾತಾನಾಡಿ ಮುಸ್ಲಿಮರಿಗೆ ಪ್ರವರ್ಗ ೨ಬಿ ಅಡಿಯಲ್ಲಿದ್ದ ಶೇ ೪ರಷ್ಟು ಮೀಸಲಾತಿಯನ್ನು ಕಿತ್ತು ಇನ್ನೊಂದು ಸಮುದಾಯಕ್ಕೆ ಹಂಚುವ ಮೂಲಕ ಸಮುದಾಯಗಳ ನಡುವೆ ದ್ವೇಷ ಬೀಜ ಬಿತ್ತಿ ಮತ ಗಳಿಸುವ ಹುನ್ನಾರ ಮಾಡಿದೆ. ಇದು ಸರ್ಕಾರದ ಅಸಂವಿಧಾನಿಕ ತೀರ್ಮಾನವಾಗಿದೆ. ಮುಸ್ಲಿಮರ ವಿರುದ್ಧ ಸರ್ಕಾರ ನಡೆಸುವ ಷಡ್ಯಂತ್ರ ಇದಾಗಿದ್ದು, ಬಿಜೆಪಿ ತನ್ನ ಕೋಮುವಾದಿತನವನ್ನು ಪದೇ ಪದೇ ಪ್ರದರ್ಶಿಸುತ್ತಲೇ ಇದೆ ಬರುವ ಚುನಾವಣೆಯಲ್ಲಿ ಇದರ ಕಾವು ಬಿಜೆಪಿಗೆ ತಟ್ಟದೇ ಇರದು ಎಂದು ಹೇಳಿದ್ದಾರೆ.
ಜಾತ್ಯತೀತ ನೆಲೆಗಟ್ಟಿನ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಸರ್ಕಾರ ವಿಫಲವಾಗಿದೆ. ಅಲ್ಪಸಂಖ್ಯಾತರ ಹಕ್ಕನ್ನು ಕಿತ್ತುಕೊಳ್ಳುವ ಮಟ್ಟಕ್ಕೆ ಇಳಿದಿರುವುದು ಖಂಡನೀಯ ವಿಷಯವಾಗಿದೆ. ಎಲ್ಲ ಸಮುದಾಯದ ಹಿತ ಕಾಯುವ ಮುಖ್ಯಮಂತ್ರಿ ಎನ್ನುವ ಅಭಿಪ್ರಾಯಕ್ಕೆ ಬಸವರಾಜ ಬೊಮ್ಮಾಯಿ ತಿಲಾಂಜಲಿ ಇಟ್ಟಿದ್ದಾರೆ ಬಿಜೆಪಿಯ ಕೋಮುದ್ವೇಷ ಈ ತೀರ್ಮಾನದಲ್ಲಿ ಎದ್ದು ಕಾಣುತ್ತದೆ ಎಂದು ತಿಳಿಸಿದ್ದಾರೆ.
ಕೂಡಲೇ ಅಲ್ಪಸಂಖ್ಯಾತರ ಹಕ್ಕನ್ನು ಕಿತ್ತುಕೊಳ್ಳುವ ನಿರ್ಧಾರ ಕೈಬಿಡಬೇಕು. ಮತಬ್ಯಾಂಕ್ ಗಾಗಿ ಓಲೈಕೆ ರಾಜಕಾರಣ ಮಾಡಬಾರದು. ಮುಸ್ಲಿಮರ ೨ಬಿ ಮೀಸಲಾತಿ ಎಥಾವತ್ತಾಗಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಸೈಯಾದ್ ಖಾಶೀಷ್, ಸೈಯದ್ ಶಬ್ಬೀರ್, ಇಕ್ಬಾಲ್ ಪಾಷ, ಎಂ ಡಿ ಇಸ್ಮಾಯಿಲ್ ಸಾಹುಕಾರ, ಎಸ್ ಎಸ್ ಬಾಬುಲ್, ಸೈಯಾದ್ ಸಲಿಂ, ಅಜರುದ್ದೀನ್ ಪಾಷ, ಅಜಮೀರ್ ಪಾಷ, ಹನುಮಂತ ಕೋಟೆ ಸೇರಿದಂತೆ ನೂರಾರು ಜನರು ಇದ್ದರು.