ಕಲಬುರಗಿ,ಮಾ.28: ಮುಸ್ಲಿಂ ಸಮುದಾಯಕ್ಕೆ ಇದ್ದ ಶೇಕಡಾ 4ರಷ್ಟು ಮೀಸಲಾತಿಯನ್ನು ರದ್ದುಪಡಿಸಿದ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಮಾರ್ಚ್ 30ರಂದು ಜೇವರ್ಗಿ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜೀವಗಾಂಧಿ ಪಂಚಾಯಿತಿರಾಜ್ ಸಂಘಟನೆ ರಾಜ್ಯ ಸಂಚಾಲಕ ಶೌಕತ್ ಅಲಿ ಆಲೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಧಿ ಮುಗಿಯುವ ಕೊನೆಯ ಗಳಿಗೆಯಲ್ಲಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ದಲಿತರಿಗಿಂತ ಹಿಂದುಳಿದಿರುವ ಮುಸ್ಲಿಂ ಸಮುದಾಯಕ್ಕೆ ಇರುವ ಶೇಕಡಾ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸುವ ಮೂಲಕ ಸಮಾಜವನ್ನು ಅಸ್ಥಿರಗೊಳಿಸುವ ಹುನ್ನಾರವಾಗಿದೆ. ಬಿಜೆಪಿ ತನ್ನ ಮುಚ್ಚಿಟ್ಟ ಅಜೆಂಡಾ ಜಾರಿಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಇಲ್ಲದಿರುವುದರಿಂದ 2(ಬಿ) ಪ್ರವರ್ಗದಡಿ ಮುಸ್ಲಿಂರು ಪಡೆಯುತ್ತಿರುವ ಮೀಸಲಾತಿಯನ್ನು ರದ್ದುಗೊಳಿಸಿ ಇಡಬ್ಲೂಎಸ್ (ಆರ್ಥಿಕವಾಗಿ ಹಿಂದುಳಿದವರ ಪಟ್ಟಿಗೆ) ಸೇರಿಸಲಾಗಿದೆ. ಇದರಿಂದ ಮುಸ್ಲಿಂರು ಶೇಕಡಾ 4ಕ್ಕಿಂತಲೂ ಹೆಚ್ಚು ಮೀಸಲಾತಿಯನ್ನು ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿರುವುದು ಶುದ್ಧ ಸುಳ್ಳು ಮತ್ತು ಆತ್ಮವಂಚನೆ ಎಂದು ಅವರು ಹರಿಹಾಯ್ದರು.
ಕೇಂದ್ರ ಸರ್ಕಾರವೇ ನೇಮಿಸಿದ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ವರದಿಯ ಪ್ರಕಾರ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ದಲಿತರಿಗಿಂತಲೂ ಹಿಂದುಳಿದ ಮುಸ್ಲಿಂರು ಅತ್ಯಂತ ಶೈಕ್ಷಣಿಕವಾಗಿ ಮುಂದುವರೆದಿರುವ ಬಲಿಷ್ಠ ಸಮುದಾಯಗಳ ಜೊತೆ ಪೈಪೋಟಿ ನಡೆಸಲು ಸಾಧ್ಯವೇ? ಎಂದು ಪ್ರಶ್ನಿಸಿರುವ ಅವರು, ಮುಸ್ಲಿಂರಿಗೆ 2ಬಿ ಅಡಿಯಲ್ಲಿ ಮೀಸಲಾತಿ ಕೊಟ್ಟಿರುವುದು ಧರ್ಮದ ಆಧಾರದ ಮೇಲೆ ಅಲ್ಲ. ಇತರೆ ಹಿಂದುಳಿದ ವರ್ಗಗಳಂತೆ ಕರ್ನಾಟಕದ ಮುಸ್ಲಿಂ ಸಮುದಾಯ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳೆಂದು ವೈಜ್ಞಾನಿಕ ಅಧ್ಯಯನದ ಮೂಲಕ ಗುರುತಿಸಿ ಒಬಿಸಿ- ಇತರೆ ಹಿಂದುಳಿದ ವರ್ಗದ ಮೀಸಲಾತಿ ನೀಡಲಾಗಿದೆ ಎಂದರು.
ಅದರಂತೆ 1920ರ ಮಿಲ್ಲರ್ ಸಮಿತಿ, ಸ್ವಾತಂತ್ರ್ಯದ ನಂತರ 1961ರ ನಾಗನಗೌಡ ಸಮಿತಿ, ವೆಂಕಟಸ್ವಾಮಿ ಆಯೋಗ ಮತ್ತು 1990ರ ಚಿನ್ನಪ್ಪರೆಡ್ಡಿ ಆಯೋಗ ಮುಸ್ಲಿಂರಿಗೆ ಮೀಸಲಾತಿಯನ್ನು ಶಿಫಾರಸ್ಸು ಮಾಡಿವೆ. 2005ರಲ್ಲಿ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ಸಮಿತಿಯು ಮುಸ್ಲಿಂರಿಗೆ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಮೇಲೆತ್ತಲು ಮೀಸಲಾತಿ ಅಗತ್ಯವೆಂದು ಪ್ರತಿಪಾದಿಸಿದೆ. 2013ರಲ್ಲಿ ಬಿಜೆಪಿ ಸರ್ಕಾರವು ಮುಸ್ಲಿಂರಿಗೆ ಒಬಿಸಿ ಪ್ರಮಾಣಪತ್ರ ಕೊಡುವ ವಿವಾದವೊಂದರಲ್ಲಿ ಸುತ್ತೋಲೆ ಹೊರಡಿಸಿ ಮುಸ್ಲಿಂರಿಗೆ ಒಬಿಸಿ ಪತ್ರ ನೀಡಲು ಸೂಚಿಸಿದೆ ಎಂದು ಅವರು ಹೇಳಿದರು.
ಸೂಕ್ತ ರೀತಿಯಲ್ಲಿ ಅಧ್ಯಯನ ಮಾಡದೇ ಮುಖ್ಯಮಂತ್ರಿಗಳು ಧರ್ಮದ ಆಧಾರಿತ ಮೀಸಲಾತಿಯನ್ನು ರದ್ದುಗೊಳಿಸಿದ್ದೇವೆ ಎಂದು ಸುಳ್ಳು ಹೇಳಿ ತಮ್ಮ ಮತ ರಾಜಕೀಯಕ್ಕಾಗಿ ಇನ್ನೊಬ್ಬರ ಹಕ್ಕುಗಳನ್ನು ಕಿತ್ತುಕೊಳ್ಳುವುದು ಹಾಗೂ ಜನಾಂಗಗಳ ಮಧ್ಯೆ ದ್ವೇಷ ಸೃಷ್ಟಿಸುವ ಮೂಲಕ ರಾಜಕೀಯ ಲಾಭ ಪಡೆಯುವ ವ್ಯವಸ್ಥಿತ ಹುನ್ನಾರ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕಳೆದ ಒಂದು ವರ್ಷದ ಹಿಂದೆ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ಮುಸ್ಲಿಂರಿಗೆ ನೀಡುವ ಮೀಸಲಾತಿಯನ್ನು ರದ್ದು ಮಾಡಿ ಪಂಚಮಶಾಲಿ ಸಮುದಾಯಕ್ಕೆ ನೀಡುವಂತೆ ಪತ್ರ ಬರೆದು ಒತ್ತಡ ತಂದಿದ್ದು ನೋಡಿದರೆ ಇದು ಪೂರ್ವನಿಯೋಜಿತ ಶಡ್ಯಂತ್ರ ಎಂದು ಟೀಕಿಸಿದ ಅವರು, ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಮಾಡುತ್ತಿರುವ ಘೋರ ಅನ್ಯಾಯ ಖಂಡನೀಯ ಎಂದರು.
ಕೂಡಲೇ ಮೀಸಲಾತಿ ರದ್ದತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ ಅವರು, ಈ ಕುರಿತು ಜೇವರ್ಗಿಯಲ್ಲಿ ಮಾರ್ಚ್ 30ರಂದು ಪ್ರತಿಭಟನಾ ಸಭೆ ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಮ್ ಪಟೇಲ್ ಪೋಲಿಸ್ ಪಾಟೀಲ್ ಇಜೇರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಖಾಸಿಂ ಪಟೇಲ್ ಪೋಲಿಸ್ ಪಾಟೀಲ್ ಮುದಬಾಳ್, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಪಟೇಲ್, ಮುಖಂಡ ಮುನ್ನಾ ಪಟೇಲ್ ಯಾಳವಾರ್ ಮುಂತಾದವರು ಉಪಸ್ಥಿತರಿದ್ದರು.