ಮುಸ್ಲಿಂ ಮೀಸಲಾತಿ ಮುಂದುವರಿಸಲು ಒತ್ತಾಯ

ರಾಯಚೂರು, ಮಾ.೩೦- ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ಯಥವತ್ತವಾಗಿ ಮುಂದುವರಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಮುಸ್ಲಿಮರಿಗೆ ಪ್ರವರ್ಗ ೨ಬಿ ಅಡಿಯಲ್ಲಿದ್ದ ಶೇ ೪ರಷ್ಟು ಮೀಸಲಾತಿಯನ್ನು ರದ್ದು ಮಾಡಿ ಇನ್ನೊಂದು ಸಮುದಾಯಕ್ಕೆ ಹಂಚಿರುವುದು ಖಂಡನೀಯ ಇದು ಸರ್ಕಾರದ ಅಸಂವಿಧಾನಿಕ ತೀರ್ಮಾನವಾಗಿದೆ. ಮುಸ್ಲಿಮರ ವಿರುದ್ಧ ಸರ್ಕಾರ ನಡೆಸುವ ಷಡ್ಯಂತ್ರ ಇದಾಗಿದ್ದು, ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಹಿಂಪಡೆದು ಪಡೆದು ಮುಂದುವರಿಸಬೇಕು. ನಿರ್ಲಕ್ಷ ಮುಂದುವರಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು. ಮುಸ್ಲಿಂ ಸಮುದಾಯ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಸಮಾಜದಲ್ಲಿ ಮುಂದುವರಿಯಲು ಶೇ.೪ ರಷ್ಟು ಮೀಸಲಾತಿ ನೀಡಲಾಗಿತ್ತು. ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ತಡೆಯೊಡ್ಡುವ ಹಾಗೂ ಮುಖ್ಯವಾಹಿನಿಗೆ ಬರದಂತೆ ನೋಡಿ ಕೊಳ್ಳುವ ಕುತಂತ್ರ ಮುಂದುವರಿದ ಭಾಗವಾಗಿ ೨ಬಿ ಮೀಸಲಾತಿ ರದ್ದುಪಡಿಸಿರುವುದು ದೃಢವಾಗುತ್ತದೆ, ಸಂವಿಧಾನದ ಆಶಯಗಳಂತೆ ಸರ್ಕಾರ ತನ್ನ ಆಡಳಿತ ನಡೆಸಬೇಕೆ ಹೊರತ. ತನ್ನ ಗುಪ್ತ ಅಜೆಂಡಾವನ್ನು ಜಾರಿಗೊಳಿಸಲು ಅಲ್ಲ, ಈ ನಿಟ್ಟಿನಲ್ಲಿ ಮುಸ್ಲಿಮ್ ಸಮುದಾಯಕ್ಕೆ ನಿಗದಿಯಾಗಿದ್ದ ೨ ಬಿ ಮೀಸಲಾತಿಯನ್ನು ಮರು ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಅಲ್ಪಸಂಖ್ಯಾತರ ಹಕ್ಕನ್ನು ಕಿತ್ತುಕೊಳ್ಳುವ ಮಟ್ಟಕ್ಕೆ ಇಳಿದಿರುವುದು ಖಂಡನೀಯ. ಎಲ್ಲ ಸಮುದಾಯದ ಹಿತ ಕಾಯುವ ಮುಖ್ಯಮಂತ್ರಿ ಎನ್ನುವ ಅಭಿಪ್ರಾಯಕ್ಕೆ ಬಸವರಾಜ ಬೊಮ್ಮಾಯಿ ತಿಲಾಂಜಲಿ ಇಟ್ಟಿದ್ದಾರೆ. ಬಿಜೆಪಿಯ ಕೋಮುದ್ವೇಷ ಈ ತೀರ್ಮಾನದಲ್ಲಿ ಎದ್ದು ಕಾಣುತ್ತದೆ ಎಂದು ಆರೋಪಿಸಿದರು ಅಲ್ಪಸಂಖ್ಯಾತರ ಹಕ್ಕನ್ನು ಕಿತ್ತುಕೊಳ್ಳುವ ನಿರ್ಧಾರ ಕೈಬಿಡಬೇಕು. ಮುಸ್ಲಿಮರ ೨ಬಿ ಮೀಸಲಾತಿ ಎಥಾವತ್ತಾಗಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಂಬಣ್ಣ ಆರೋಲಿ, ರಾಘವೇಂದ್ರ ಬೋರೆಡ್ಡಿ, ಎಸ್ ನರಸಿಂಹಲು, ಜಾಫರ್ ಸಾಧಿಕ್, ಜಲಾಲ್, ಸೈಯದ್ ವಾಹಿದ್ ಸೇರಿದಂತೆ ಉಪಸ್ಥಿತರಿದ್ದರು.