ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ ಅಗತ್ಯ

ಕಲಬುರಗಿ,ಆ.02:ಮುಸ್ಲಿಂ ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಸಂವಿಧಾನ, ಕಾಯ್ದೆ-ಕಾನೂನುಗಳು ಅವರಿಗೆ ಹಕ್ಕುಗಳನ್ನು ನೀಡಿದ್ದು, ಅವುಗಳಿಗೆ ತೊಂದರೆಯಾಗದಂತೆ ರಕ್ಷಣೆ ಮಾಡಿದರೆ, ಮಹಿಳೆಯರ ಏಳ್ಗೆ ಸಾಧ್ಯವಿದೆ ಎಂದು ಪ್ರಗತಿಪರ ಮಹಿಳಾ ಚಿಂತಕಿ ಬಿಸ್ಮಿಲ್ಲಾ ಐ.ಅತ್ತರ್ ಹೇಳಿದರು.
ನಗರದ ಜೆ.ಆರ್.ನಗರದಲ್ಲಿರುವ ‘ಕೊಹಿನೂರ ಕಂಪ್ಯೂಟರ ಮತ್ತು ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ರಾಷ್ಟ್ರೀಯ ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಸ್ಲಿಂ ಮಹಿಳೆಯರಿಗೆ ದೊರೆಯಬೇಕಾದ ಸೌಲಭ್ಯಗಳು ದೊರೆಯಬೇಕು. ಧಾರ್ಮಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಮುನ್ನುಗ್ಗಲು ಪ್ರೇರಣೆ ನೀಡಬೇಕು. ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದೆ. ಮಹಿಳೆಯರು ಧೃತಿಗೆಡದೆ ಮುನ್ನಗ್ಗಬೇಕು ಎಂದರು.
ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಎಲ್ಲಾ ಮುಸ್ಲಿಂ ಮಹಿಳೆಯರು ಉನ್ನತ ಶಿಕ್ಷಣವನ್ನು ಪಡೆಯಬೇಕು. ವೈಚಾರಿಕತೆ ಬೆಳೆಸಿಕೊಳ್ಳಬೇಕು. ಅವರ ಭಾಷೆ, ಸಂಸ್ಕøತಿಯನ್ನು ಗೌರವಿಸಬೇಕು. ಮುಳ್ಯವಾಹಿನಿಗೆ ಬರಲು ಅವಕಾಶಗಳನ್ನು ಒದಗಿಸಿಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಸತೀಸ್ ಟಿ.ಸಣಮನಿ, ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ಅಕಾಡೆಮಿಯ ದತ್ತು ಹಡಪದ, ಇಸ್ಮೈಲ್ ಅತ್ತರ್, ಪ್ರಮುಖರಾದ ಶೋಫಿಯಾ ಬೇಗಂ, ಫರ್ದುಸ್ ಆರ್.ಪಟೇಲ್, ಪೃಥ್ವಿ ಕೋರವಾರ ಸೇರಿದಂತೆ ಮತ್ತಿತರರಿದ್ದರು.