ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ

ಸೈದಾಪುರ:ಎ.23:ಇಲ್ಲಿನ ಈದ್ಗಾ ಮೈದಾನದಲ್ಲಿ ರಂಜಾನ ಹಬ್ಬದ ಅಂಗವಾಗಿ ಸೈದಾಪುರ ಪಟ್ಟಣ ಸೇರಿದಂತೆ ಮುನಗಾಲ, ಕೊಂಡಾಪುರ, ಬೆಳಗುಂದಿ, ಭೀಮನಳ್ಳಿ, ಗೊಂದೆಡಗಿ ಗ್ರಾಮಗಳಿಂದ ಮುಸ್ಲಿಂ ಬಾಂಧವರು ಆಗಮಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಮನೆಯಲ್ಲಿ ಸಿಹಿ ಅಡುಗೆಯನ್ನು ಮಾಡಿ ಎಲ್ಲರಿಗೂ ಹಂಚುತ್ತ, ಈದ್ಗಾ ಮೈದಾನಕ್ಕೆ ಹೋಗಿ ಅಲ್ಲಾಹನನ್ನು ಪ್ರಾರ್ಥಿಸಿ, 30 ದಿನಗಳ ಉಪವಾಸಕ್ಕೆ ತೆರೆ ಎಳೆದರು. ಹೊಸ ಉಡುಪುಗಳನ್ನು ಧರಿಸಿ ಚಿಣ್ಣರು ಹಿರಿಯರು ಸೇರಿದಂತೆ ಎಲ್ಲರು ಹಬ್ಬದ ಶುಭಕೋರಿದರು. ತಮ್ಮ ಮನೆಗಳಲ್ಲಿ ಸುರುಕುಂಬ ಎಂಬ ವಿಶೇಷ ಸಿಹಿಯನ್ನು ತಯಾರಿಸಿ ಅಕ್ಕ-ಪಕ್ಕದ ಮನೆಗಳಿಗೆ, ಸ್ನೇಹಿತರಿಗೆ ಹಂಚಿ ಸಂಭ್ರಮಿಸಿದರು.

ಈ ಹಬ್ಬದಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಅನ್ನ ಆಹಾರ ಮತ್ತು ಬಯಕೆಗಳಿಂದ ದೂರವಿದ್ದು, ಸಾಮಾಜಿಕ ಸಮನ್ವಯತೆ, ಕಡ್ಡಾಯ ದಾನದ ಮೂಲಕ ಸಮಾಜದಲ್ಲಿ ಪರಸ್ಪರ ಸಮಾನತೆ, ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸುವ ಮೂಲಕ ದೇವರ ಅನುಗ್ರಹಕ್ಕೆ ಪಾತ್ರನಾಗುವಂತೆ ರೋಜಾ ತಿಳಿಸುತ್ತದೆ. ರಂಜಾನ ಪವಿತ್ರ ದಿನಗಳಲ್ಲಿ ಶ್ರದ್ಧೆಯಿಂದ ಉಪವಾಸವನ್ನು ಆಚರಿಸುತ್ತಾರೆ ಎಂದು ಹಿರಿಯರು ಹೇಳುತ್ತಾರೆ.