ಮುಸ್ಲಿಂ ಧರ್ಮ ಗುರುಗಳ, ರಾಜಕೀಯ ಮುಖಂಡರ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ:ಸೆ.25: ಮುಸ್ಲಿಂ ಸಮಾಜದ ಧರ್ಮಗುರುಗಳು ಹಾಗೂ ರಾಜಕೀಯ ಮುಖಂಡರನ್ನು ಗುರಿಯಾಗಿರಿಸಿ ಬಂಧಿಸಲಾಗಿದ್ದು, ಕೂಡಲೇ ಅವರನ್ನು ಬೇಶರತ್ತಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಶನಿವಾರ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಮೌಲಾನಾ ಅಬ್ದುಲ್ ಸಿದ್ದಕಿಯವರು ಎಲ್ಲ ಧರ್ಮಿಯರಿಗೂ ಬೇಕಾದ ಜನಪ್ರೀಯ ವ್ಯಕ್ತಿಯಾಗಿದ್ದಾರೆ. ದೇಶದಲ್ಲಿ ಅಷ್ಟೇ ಅಲ್ಲ, ಹೊರದೇಶಗಳಲ್ಲಿಯೂ ಅವರು ಜನಪ್ರೀಯರಾಗಿದ್ದಾರೆ. ದೇಶವನ್ನು ಉತ್ತಮ ಮಾರ್ಗದತ್ತ ಕೊಂಡೊಯ್ಯಲು ಶ್ರಮಿಸುತ್ತಿದ್ದಾರೆ. ಇಸ್ಲಾಂ ಧರ್ಮದಲ್ಲಿನ ಶಾಂತಿ ಹಾಗೂ ಸಹನೆಯ ಕುರಿತು ಅವರು ಸಂದೇಶ ಸಾರುತ್ತಿದ್ದಾರೆ. ದೇಶದ ಕಾನೂನು ಹಾಗೂ ಸಂವಿಧಾನವನ್ನು ಅವರು ಗೌರವಿಸುತ್ತಾರೆ. ಅಂತಹವರನ್ನು ಅಚ್ಚರಿದಾಯಕವಾಗಿ ಅವರ ಮನೆಯಲ್ಲಿ ಬಂಧಿಲಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮೌಲಾನಾ ಉಮರ್ ಗ್ಯಾತಮ್ ಅವರು ಮುಸ್ಲಿಮೇತರ ವ್ಯಕ್ತಿಯಾಗಿ ಮುಸ್ಲಿಂ ಧರ್ಮವನ್ನು ಸೇರಿದವರು. ಇಸ್ಲಾಂ ಧರ್ಮದಲ್ಲಿನ ಶಾಂತಿ ಹಾಗೂ ಸಹಬಾಳ್ವೆಯ ಕುರಿತು ಅವರು ಸಂದೇಶ ಸಾರುತ್ತಿದ್ದರು. ಅವರನ್ನೂ ಸಹ ಬಂಧಿಸಲಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಮುಫ್ತಿ ಜಹಾಂಗೀರ್ ಖಾಸ್ಮಿ ಅವರ ವಿರುದ್ಧ ಯಾವುದೇ ಪ್ರಕರಣಗಳು ಇರದೇ ಇದ್ದರೂ ಸಹ ಪೋಲಿಸರು ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಹಲವಾರು ಸಂದರ್ಭದಲ್ಲಿ ಸರ್ಕಾರದ ಏಜೆನ್ಸಿಗಳು ಹಾಗೂ ಕೆಲವು ಅಧಿಕಾರಿಗಳು ಮುಸ್ಲಿಂ ಸಮಾಜದ ಧಾರ್ಮಿಕ ಗುರುಗಳನ್ನು ಹಾಗೂ ರಾಜಕೀಯ ಮುಖಂಡರನ್ನು ಗುರಿಯಾಗಿರಿಸಿ ಬಂಧಿಸುತ್ತಿವೆ. ಇದು ಸಂವಿಧಾನ ಹಾಗೂ ಕಾನೂನಿಗೆ ಗಂಡಾಂತರ ತರುತ್ತಿದೆ ಎಂದು ಅವರು ಎಚ್ಚರಿಸಿದರು.
ಕೂಡಲೇ ಬಂಧಿತ ಸಮಾಜದ ಧಾರ್ಮಿಕ ಗುರುಗಳನ್ನು ಹಾಗೂ ರಾಜಕೀಯ ಮುಖಂಡರನ್ನು ಬಿಡುಗಡೆ ಮಾಡುವಂತೆ, ಮುಸ್ಲಿಂ ಸಮಾಜದ ಗಣ್ಯರನ್ನು ಅನುಮಾನದಿಂದ ನೋಡುವ ರೀತಿಯಲ್ಲಿ ಅವರ ವಿರುದ್ಧ ಅನಾವಶ್ಯಕ ಕಾನೂನು ಕ್ರಮಗಳನ್ನ ಕೈಗೊಳ್ಳುವುದನ್ನು ನಿಲ್ಲಿಸುವಂತೆ, ಸರ್ಕಾರದ ಕೆಲ ಅಧಿಕಾರಿಗಳು ಸಮಾಜದ ಗಣ್ಯರನ್ನು ಗುರಿಯಾಗಿರಿಸಿ ಕಾನೂನು ಕ್ರಮ ಕೈಗೊಳ್ಳುತ್ತಿದ್ದು, ಕೂಡಲೇ ಅಂಥವರ ವಿರುದ್ಧ ತನಿಖೆ ಕೈಗೊಂಡು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ, ದೇಶದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮೌಲಾನಾ ಅತಿಕುರ್ ರೆಹಮಾನ್, ಹಫೀಜ್ ಮಸೂದ್, ಮೌಲಾನಾ ಅಬ್ದುಲ್ ಖಾದರ್ ಮುಂತಾದವರು ಪಾಲ್ಗೊಂಡಿದ್ದರು. ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಈಗಾಗಲೇ ಬಂಧಿಸಲ್ಪಟ್ಟಿರುವ ಮೌಲಾನಾ ಕಲೀಂ ಸಿದ್ದಕಿ, ಮೌಲಾನಾ ಉಮರ್ ಗ್ಯಾತಮ್, ಮುಫ್ತಿ ಜಹಾಂಗೀರ್ ಖಾಸ್ಮಿ ಮುಂತಾದವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.