ಮುಸ್ಲಿಂ ಧರ್ಮಗುರು ಐಸಿಸ್ ನಂಟು : ತನಿಖೆಗೆ ಕೇಂದ್ರ ಗೃಹ ಸಚಿವರಿಗೆ ಯತ್ನಾಳ ಪತ್ರ

ವಿಜಯಪುರ:ಡಿ.7:ಐಸಿಸ್ ಉಗ್ರರ ಜೊತೆಗೆ ಸಂಪರ್ಕ ಹೊಂದಿರುವ ನಗರದ ಹಾಸಿಂಪೀರ ದರ್ಗಾದ ಮುಸ್ಲಿಂ ಧರ್ಮಗುರು ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಸ್ಮಿ ಅವರು ಮುಖ್ಯ ಮಂತ್ರಿ ಸಿದ್ಧರಾಮಯ್ಯ ಹಾಗೂ ಇತರ ಸಚಿವರೊಂದಿಗೆ ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದಾರೆಂದು ಆರೋಪಿಸಿ, ಈ ಬಗ್ಗೆ ಧರ್ಮಗುರು ವಿರುದ್ಧ ತನಿಖೆ ನಡೆಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ ಶಾ ಅವರಿಗೆ ವಿಜಯಪುರ ನಗರ ಶಾಸಕ ಪತ್ರ ಬರೆದಿದ್ದಾರೆ.
ಯತ್ನಾಳ ಅವರ ಈ ಪತ್ರ ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಈ ಧರ್ಮಗುರು ಐಸಿಸ್ ಉಗ್ರರ ಜೊತೆಗೆ ನಂಟು ಹೊಂದಿರುವ ಬಗ್ಗೆ ಆಧಾರ, ದಾಖಲೆ ನೀಡುವುದಾಗಿ ಯತ್ನಾಳ ಪತ್ರದಲ್ಲಿ ತಿಳಿಸಿದ್ದಾರೆ.

ಯತ್ನಾಳ ಆರೋಪದಲ್ಲಿ ಹುರುಳಿಲ್ಲ:
ಧರ್ಮಗುರು ಸೈಯದ ಮೊಹ್ಮದ ತನ್ವೀರಪೀರಾ ಅವರು ಯತ್ನಾಳ ಆರೋಪಕ್ಕೆ ಪ್ರಕಟಣೆ ಮೂಲಕ ತಿರುಗೇಟು ನೀಡಿದ್ದಾರೆ.
ಒಂದು ವೇಳೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಸಾಬೀತಾದರೆ ನಾನು ಈ ದೇಶವನ್ನು ತ್ಯಾಗ ಮಾಡಿ ಪಲಾಯನ ಮಾಡುತ್ತೇನೆ.
ಸಾಬೀತು ಮಾಡದಿದ್ದರೆ ಯತ್ನಾಳ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾಕಿಸ್ತಾನಕ್ಕೆ ಪಲಾಯನ ಮಾಡಬೇಕೆಂದು ಸವಾಲು ಹಾಕಿದ್ದಾರೆ.
ನನ್ನ ಮೇಲೆ ಯತ್ನಾಳ ಮಾಡಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ.
04-12-2023ರಂದು ಹುಬ್ಬಳ್ಳಿಯಲ್ಲಿ ನಡೆದ ಅವಲಾದ ಗೌಸ ಎ ಆಜಮ್ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದೆ.
ಇದೇ ವೇದಿಕೆಯಲ್ಲಿ ವಿವಿಧ ದರ್ಗಾದ ಪೀಠಾಧೀಶರು, ರಾಜಕೀಯ ಧುರೀಣರು
ಸಿಎಂ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ. ಪಾಟೀಲ ಹಾಗೂ ಇತರೆ ಮಂತ್ರಿಗಳು ಶಾಸಕರು ಉಪಸ್ಥಿತರಿದ್ದರು.
ಸಿಎಂ ಯಾವುದೇ ಕೋಮಿನವರಿಗೆ ಅಥವಾ ಸಮಾಜದವರಿಗೆ ಸೀಮಿತವಾಗಿಲ್ಲ.
ರಾಜಕಾರಣದಲ್ಲಿ ಎಲ್ಲಾ ಧರ್ಮ ಮತ್ತು ಜಾತಿಗಳ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಿಎಂ ಅವರ ಜನಪ್ರಿಯತೆಯನ್ನು ಸಹಿಸದೆ ಹತಾಶರಾಗಿ, ಯತ್ನಾಳ ನನ್ನ ವಿರುದ್ಧ ಹೇಳಿಕೆ ನೀಡಿದ್ದಾರೆ
ಯತ್ನಾಳ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶ ಇರುವದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.