ಮುಷ್ಕರ: ಸರ್ಕಾರಿ ಸೇವೆ ವ್ಯತ್ಯಯ

ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ ಕಚೇರಿಗೆ ಬೀಗ ಜಡಿದಿರುವುದು.

ಬೆಂಗಳೂರು,ಮಾ.೧:ವೇತನ ಪರಿಷ್ಕರಣೆ ಮತ್ತು ಎನ್‌ಪಿಎಸ್ ರದ್ದತಿಗೆ ಆಗ್ರಹಿಸಿ ರಾಜ್ಯಾದ್ಯಂತ ಸರ್ಕಾರಿ ನೌಕರರು ಇಂದಿನಿಂದ ಅನಿರ್ಧಿಷ್ಠಾವಧಿ ಮುಷ್ಕರ ಆರಂಭಿಸಿ ಇಂದು ಬೆಳಿಗ್ಗೆ ಕರ್ತವ್ಯಕ್ಕೆ ಗೈರುಹಾಜರಾಗಿದ್ದರು. ಮುಷ್ಕರ ವಾಪಸ್ಸಾದ ಹಿನ್ನೆಲೆಯಲ್ಲಿ ಮಧ್ಯಾಹ್ನದ ನಂತರ ಕರ್ತವ್ಯಕ್ಕೆ ಹಾಜರಾದರು.
ಇಂದು ಬೆಳಿಗ್ಗೆ ನೌಕರರ ಮುಷ್ಕರದಿಂದ ಶಕ್ತಿಕೇಂದ್ರ ವಿಧಾನಸೌಧ, ವಿಕಾಸಸೌಧ ಸೇರಿದಂತೆ ಎಲ್ಲೆಡೆ ಸರ್ಕಾರಿ ಕಚೇರಿಗಳು ಬಂದ್ ಆಗಿದ್ದು, ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು. ಮುಷ್ಕರದಲ್ಲಿ ಪಾಲ್ಗೊಂಡು ಗೈರು ಹಾಜರಾಗುವ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸರ್ಕಾರ ನೀಡಿದ್ದರೂ ಅದನ್ನು ಲೆಕ್ಕಿಸದೆ ನೌಕರರು ಮುಷ್ಕರ ಆರಂಭಿಸಿದ್ದು, ಇಡೀ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳಿಗೆ ನೌಕರರು ಗೈರು ಹಾಜರಾಗಿದ್ದರಿಂದ ಬೆಳಿಗ್ಗೆ ಸರ್ಕಾರಿ ಸೇವೆಗಳು ಸ್ಥಗಿತಗೊಂಡಿದ್ದವು. ಆಸ್ಪತ್ರೆಗಳಲ್ಲೂ ಒಳರೋಗಿ ಮತ್ತು ತುರ್ತು ಸೇವೆ ಹೊರತುಪಡಿಸಿ ಉಳಿದ ಸೇವೆಗಳ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದು, ರೋಗಿಗಳ ಚಿಕಿತ್ಸೆ ಸಿಗದೆ ಪರದಾಡಿದರು.
ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಶಾಲಾ ಶಿಕ್ಷಕರು, ಕಾಲೇಜು ಉಪನ್ಯಾಸಕರು, ಕಂದಾಯ ಇಲಾಖೆ ನೌಕರರು ಸೇರಿದಂತೆ ಕರ್ನಾಟಕ ಸಚಿವಾಲಯ ನೌಕರರು ಸೇರಿದಂತೆ ಎಲ್ಲರೂ ಬೆಂಬಲ ನೀಡಿದ್ದು, ಮುಷ್ಕರ ಬಹುತೇಕ ಯಶಸ್ವಿಯಾಯಿತು.

ಸರ್ಕಾರಿ ನೌಕರರು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂಭಾಗದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ನಾಯಿಯೊಂದು ನಡೆದು ಹೋಗುತ್ತಿರುವುದು.

ವಿಧಾನಸೌಧ-ವಿಕಾಸಸೌಧ ಬಿಕೋ
ಸರ್ಕಾರಿ ನೌಕರರ ಮುಷ್ಕರದಿಂದ ನಾಡಿನ ಆಡಳಿತದ ಶಕ್ತಿಕೇಂದ್ರವಾದ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದ ಕಚೇರಿಗಳು ಬಿಕೋ ಎನ್ನುತ್ತಿದ್ದವು. ಬೆಳಿಗ್ಗೆ ಕಚೇರಿಗಳ ಬೀಗವನ್ನೇ ತೆರೆದಿರಲಿಲ್ಲ. ಬೆಳಿಗ್ಗೆ ಬಹುತೇಕ ನೌಕರರು ಗೈರು ಹಾಜರಾಗಿದ್ದು, ಮುಷ್ಕರ ಶೇ. ೯೯ ರಷ್ಟು ಯಶಸ್ವಿಯಾಗಿದೆ ಎಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಹೇಳಿದರು.
ಸಚಿವಾಲಯ ನೌಕರರ ಸಂಘದ ಅಡಿಯಲ್ಲಿ ಸಚಿವಾಲಯದ ನೌಕರರು ವಿಧಾನಸೌಧದ ಮಹಾತ್ಮಗಾಂಧಿ ಪ್ರತಿಮೆ ಬಳಿ ಮೌನ ಪ್ರತಿಭಟನೆ ನಡೆಸಿ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ವೇತನ ಹೆಚ್ಚಳ ಆಗಬೇಕು. ಇದನ್ನು ನಮ್ಮ ಹಕ್ಕು. ನೌಕರರು ಕೋವಿಡ್ ಸಂದರ್ಭದಲ್ಲೂ ಕೆಲಸ ಮಾಡಿದ್ದಾರೆ. ಪ್ರವಾಹ ಸಂತ್ರಸ್ಥರಿಗೂ ನೆರವಾಗಿದ್ದಾರೆ. ಪುಣ್ಯಕೋಟಿ ದತ್ತು ಯೋಜನೆಗೂ ದೇಣಿಗೆ ನೀಡಿದ್ದಾರೆ. ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಮಧ್ಯಾಹ್ನದ ನಂತರ ನೌಕರರ ಹಾಜರ್ವೇ ತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿ ಮುಷ್ಕರ ವಾಪಸ್ಸಾದ ಬಳಿಕ ಮಧ್ಯಾಹ್ನ ಬಹುತೇಕ ನೌಕರರು ಕೆಲಸಕ್ಕೆ ಹಾಜರಾದರು.