ಮುಷ್ಕರ ಮುಂದುವರೆಸಿದರೆ ಕಠಿಣ ಕ್ರಮ: ಸಿಎಂ ಎಚ್ಚರಿಕೆ

ಬೆಳಗಾವಿ, ಏ. ೮- ಸಾರಿಗೆ ನೌಕರರ ಬೇಡಿಕೆಗಳನ್ನು ಸರ್ಕಾರ ಈಗಾಗಲೇ ಈಡೇರಿಸಿದೆ. ಇಷ್ಟಾದರೂ ನೌಕರರು ಮುಷ್ಕರ ನಿರತರಾಗಿರುವುದು ಸರಿಯಲ್ಲ. ಕೂಡಲೇ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಈ ಆರ್ಥಿಕ ಸಂಕಷ್ಟ ಕಾಲದಲ್ಲೂ ನೌಕರರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಶೇ. ೮ ರಷ್ಟು ವೇತನ ಹೆಚ್ಚಳದ ತೀರ್ಮಾನ ಕೈಗೊಳ್ಳಲಾಗಿದೆ. ನೌಕರರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಸಾರಿಗೆ ಮುಷ್ಕರದಿಂದ ಜನರಿಗೆ ಅನಾನುಕೂಲವಾಗಿದೆ. ಈ ರೀತಿ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ. ನೌಕರರು ಮುಷ್ಕರ ವಾಪಸ್ ಪಡೆದು ಕೆಲಸಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಕಠಿಣ ಕ್ರಮ ನಿಶ್ಚಿತ ಎಂದು ಅವರು ಹೇಳಿದರು.
ಇಂದು ಬೆಂಗಳೂರಿಗೆ ತೆರಳಿದ ನಂತರ ಸಂಜೆ ನೌಕರರ ಮುಷ್ಕರ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆಲಸಕ್ಕೆ ಹಾಜರಾಗದ ನೌಕರರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳುವ ಸುಳಿವನ್ನು ಅವರು ನೀಡಿದರು.
ಉಪಚುನಾವಣೆಯಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲಲಿದೆ. ನಿನ್ನೆ ಬೆಳಗಾವಿಯಲ್ಲಿ ಪ್ರಚಾರ ನಡೆಸಿದ್ದೇನೆ. ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ದೊಡ್ಡ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಹುಬ್ಬಳ್ಳಿ ವರದಿ
ಪ್ರಯಾಣಿಕರಿಗೆ ಭಯ ಬೇಡ
ರಾಜ್ಯ ಸರ್ಕಾರದ ಮೇಲೆ ಪ್ರಯಾಣಿಕರು ಭರವಸೆ ಇಡಿ. ಯಾವುದಕ್ಕೂ ಭಯಪಡುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಸಾರಿಗೆ ಸಂಸ್ಥೆ ನೌಕರರು ಹಮ್ಮಿಕೊಂಡಿರುವ ಅನಿರ್ದಿಷ್ಟ ಮುಷ್ಕರಕ್ಕೆ ಸಂಬಂಧಿಸಿದಂತೆ ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಯಾಣಿಕರಿಗೆ ಅನುಕೂಲವಾಗಲು ಖಾಸಗಿ ವಾಹನಗಳ ವ್ಯವಸ್ಥೆಗೆ ಸರ್ಕಾರ ಸೂಚಿಸಿದೆ. ಪ್ರಯಾಣಿಕರು ಭಯಪಡುವ ಅವಶ್ಯಕತೆ ಇಲ್ಲ ಎಂದರು.
ಖಾಸಗಿ ವಾಹನಗಳು ಹೆಚ್ಚಿನ ದರ ವಸೂಲಿ ಮಾಡುತ್ತಿವೆ ಎಂಬ ಆರೋಪಗಳು ಕೇಳಿಬಂದಿದೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಖಾಸಗಿ ವಾಹನಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿಲ್ಲ. ನಿಗದಿ ಮಾಡಿದ ಹಣ ಮಾತ್ರ ತೆಗೆದುಕೊಳ್ಳುತ್ತಿವೆ. ಒಂದು ವೇಳೆ ಹೆಚ್ಚಿನ ಹಣ ನಿಗದಿ ಮಾಡಿದರೆ ಕ್ರಮ ಜರುಗಿಸುತ್ತೇವೆ. ಇಂದು ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸುತ್ತೇನೆ ಎಂದು ನುಡಿದರು.
ಸಿಎಂ ಗರಂ
ಖಾಸಗಿ ವಾಹನಗಳ ವ್ಯವಸ್ಥೆಯನ್ನು ಸರ್ಕಾರ ಮಾಡಿದ್ದು, ಈ ವಾಹನಗಳ ವಿಮೆ ಹಾಗೂ ಅನಾಹುತಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ಅನಾಹುತಗಳ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ. ನಮಗೆ ಹೇಗೆ ಸರ್ಕಾರವನ್ನು ನಡೆಬೇಕೆಂಬುದು ಗೊತ್ತಿದೆ ಎಂದು ಮಾಧ್ಯಮದವರ ಮೇಲೆ ಸಿಡಿಮಿಡಿಗೊಂಡರು.