ಮುಷ್ಕರ ತಡೆಗೆ ಸರ್ಕಾರ ಯತ್ನ

ಬೆಂಗಳೂರು,ಫೆ.೨೮: ರಾಜ್ಯ ಸರ್ಕಾರಿ ನೌಕರರಿಗೆ ೭ನೇ ವೇತನ ಆಯೋಗದ ಮಧ್ಯಂತರ ವರದಿ ಜಾರಿಗೆ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರೂ ಲಿಖಿತ ಭರವಸೆ ಸಿಗದ ಹೊರತು ಮುಷ್ಕರ ಹಿಂಪಡೆಯಲ್ಲ, ಮುಷ್ಕರ ನಡೆಸಿಯೇ ಸಿದ್ಧ ಎಂದು ಸರ್ಕಾರಿ ನೌಕರರು ಹೇಳಿರುವುದು ಸರ್ಕಾರ ಮತ್ತು ನೌಕರರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾಳೆಯಿಂದ ಮುಷ್ಕರಕ್ಕೆ ಇಳಿಯಲಿರುವ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜತೆ ಸರ್ಕಾರದ ಹಿರಿಯ ಅಧಿಕಾರಿಗಳು ಸಂಪರ್ಕದಲ್ಲಿದ್ದು ಮಾತುಕತೆ ನಡೆಸಿದ್ದಾರೆ. ಅವರ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದಾರೆ. ಆದರೆ ಸರ್ಕಾರಿನೌಕರರು ತಮ್ಮ ಪಟ್ಟನ್ನು ಸಡಿಲಿಸಿಲ್ಲ. ಇದು ಬಿಕ್ಕಟ್ಟಿಗೆ ಕಾರಣವಾಗಿದ್ದು, ನಾಳೆ ಮುಷ್ಕರ ಆರಂಭವಾದರೆ ಸರ್ಕಾರಿ ಸೇವೆಗಳು ಬಹುತೇಕ ಸ್ಥಗಿತವಾಗಲಿವೆ. ಹಾಗೆಯೇ ಶಾಲಾ-ಕಾಲೇಜುಗಳು ಬಂದ್ ಆಗುವ ಸಾಧ್ಯತೆ ಇವೆ.ಸರ್ಕಾರಿ ನೌಕರರಿಗೆ ೭ನೇ ವೇತನ ಆಯೋಗವನ್ನು ರಚನೆ ಮಾಡಿದ್ದೇ ನಮ್ಮ ಸರ್ಕಾರ, ಈ ಆಯೋಗದ ವರದಿಯನ್ನು ೨೦೨೩-೨೪ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲು ಬದ್ಧವಾಗಿ ಬಜೆಟ್‌ನಲ್ಲಿ ಹಣವನ್ನು ಮೀಸಲಿರಿಸಲಾಗಿದೆ ಎಂದರು.ಸರ್ಕಾರಿ ನೌಕರರು ಮಧ್ಯಂತರ ವರದಿ ಪಡೆದು ಅದನ್ನು ಜಾರಿ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಜಾರಿ ಮಾಡಲು ನಾವು ಸಿದ್ಧರಿದ್ದೇವೆ. ವಿಧಾನಸಭೆಯಲ್ಲಿ ಈಗಾಗಲೇ ನಾನು ಸ್ಪಷ್ಟಪಡಿಸಿದ್ದೇನೆ. ೭ನೇ ವೇತನ ಆಯೋಗದ ಮಧ್ಯಂತರ ವರದಿ ಪಡೆದು ಅದನ್ನು ಜಾರಿ ಮಾಡುವುದಾಗಿಯೂ ಹೇಳಿದ್ದೇನೆ ಎಂದರು.೭ನೇ ವೇತನ ಆಯೋಗಕ್ಕೆ ಸೂಚನೆ ನೀಡಿ ಮಧ್ಯಂತರ ವರದಿ ಪಡೆದು ಅದನ್ನು ಅನುಷ್ಠಾನಗೊಳಿಸಲು ಸಿದ್ಧರಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮುಷ್ಕರ ಖಚಿತ
೭ನೇ ವೇತನ ಆಯೋಗದ ಮಧ್ಯಂತರ ವರದಿ ಜಾರಿ ಹಾಗೂ ನೂತನ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ರದ್ದತಿ, ಬೇಡಿಕೆಯನ್ನಿಟ್ಟುಕೊಂಡು ನಾಳೆಯಿಂದ ರಾಜ್ಯಾದ್ಯಂತ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿರುವ ಸರ್ಕಾರಿ ನೌಕರರು, ಬೇಡಿಕೆ ಈಡೇರಿಕೆಗೆ ಲಿಖಿತ ಭರವಸೆ ನೀಡುವಂತೆ ಪಟ್ಟು ಹಿಡಿದಿದ್ದು, ಸರ್ಕಾರ ಲಿಖಿತ ಭರವಸೆಗೆ ಒಪ್ಪದಿದ್ದರೆ ನಾಳೆಯಿಂದ ಸರ್ಕಾರಿ ನೌಕರರ ಮುಷ್ಕರ ಆರಂಭವಾಗುವುದು ನಿಶ್ಚಿತ ಎಂದು ಸರ್ಕಾರಿ ನೌಕರರ ಸಂಘದ ಮೂಲಗಳು ಹೇಳಿವೆ.
ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಮನವೊಲಿಕೆಗೆ ಹಿರಿಯ ಅಧಿಕಾರಿಗಳು ಪ್ರಯತ್ನ ನಡೆಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರೇ ಖುದ್ದು ೭ನೇ ವೇತನ ಆಯೋಗದ ಮಧ್ಯಂತರ ವರದಿ ಜಾರಿಗೆ ಸಿದ್ಧ ಎಂದು ಹೇಳಿದ್ದಾರೆ. ಅವರ ಮಾತಿಗೆ ಓಗೊಟ್ಟು ಮುಷ್ಕರ ಕೈಬಿಡಿ ಎಂದು ಹಿರಿಯ ಅಧಿಕಾರಿಗಳು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಸರ್ಕಾರಿ ನೌಕರರು ಲಿಖಿತ ಭರವಸೆ ಬೇಡಿಕೆಯಿಂದ ಹಿಂದೆ ಸರಿದಿಲ್ಲ. ಹಾಗಾಗಿ, ಮುಷ್ಕರ ಖಚಿತ ಎನ್ನಲಾಗಿದೆ.

ನಾಳೆ ಸರ್ಕಾರಿ ಸೇವೆ ಸ್ಥಗಿತ,ಶಾಲೆ ಬಂದ್
ಸರ್ಕಾರಿ ನೌಕರರ ಬೇಡಿಕೆ ಈಡೇರಿಸುವ ಸರ್ಕಾರದ ಭರವಸೆಗೆ ಒಪ್ಪದೆ ನಾಳೆ ಸರ್ಕಾರಿ ನೌಕರರು ಮುಷ್ಕರ ಆರಂಭಿಸಿ ಕರ್ತವ್ಯಕ್ಕೆ ಗೈರು ಹಾಜರಾದರೆ ನಾಳೆ ರಾಜ್ಯಾದ್ಯಂತ ಸರ್ಕಾರಿ ಸೇವೆ ಸ್ಥಗಿತಗೊಳ್ಳಲಿದೆ.
ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ನೋಂದಣಿ ಕಚೇರಿ, ತಹಶೀಲ್ದಾರ್ ಕಚೇರಿ, ಹೊರ ರೋಗಿ ಆರೋಗ್ಯ ಸೇವೆ ಸೇರಿದಂತೆ ಬಹುತೇಕ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಿ ಇವೆಲ್ಲ ಬಂದ್ ಆಗಲಿವೆ. ಮಹಾನಗರ ಪಾಲಿಕೆಯ ನೌಕರರು, ಗ್ರಾಮಪಂಚಾಯ್ತಿ ಸಿಬ್ಬಂದಿ, ಸ್ಥಳೀಯ ಸಂಸ್ಥೆ ಸಿಬ್ಬಂದಿಗಳು ಮುಷ್ಕರಕ್ಕೆ ಬೆಂಬಲ ನೀಡಿರುವುದರಿಂದ ಕಸ ಸಂಗ್ರಹಣೆ, ಕುಡಿಯುವ ನೀರು ಪೂರೈಕೆಯಲ್ಲೂ ವ್ಯತ್ಯಯವಾಗುವ ಸಾಧ್ಯತೆಗಳಿವೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಮತ್ತು ಒಳ ರೋಗಿ ಸೇವೆಗಳು ಎಂದಿನಂತೆ ಮುಂದುವರೆಯಲಿದೆ. ಸಾರಿಗೆ ಬಸ್‌ಗಳ ಓಡಾಟದಲ್ಲೂ ಯಾವುದೇ ತೊಂದರೆ ಇರುವುದಿಲ್ಲ.

ಮುಷ್ಕರ ನಿಲ್ಲಲ್ಲ:ಷಡಾಕ್ಷರಿ
ಸರ್ಕಾರಿ ನೌಕರರು ಮುಷ್ಕರ ನಡೆಸುವುದು ಶತಸಿದ್ಧ, ಯಾವುದೇ ಕಾರಣಕ್ಕೂ ಮುಷ್ಕರವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎನ್ ಷಡಾಕ್ಷರಿ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳಿನ ಸರ್ಕಾರಿ ನೌಕರರ ಮುಷ್ಕರದಲ್ಲಿ ಹಿರಿಯ ಅಧಿಕಾರಿಗಳೂ ಸೇರಿದಂತೆ ಎಲ್ಲ ನೌಕರರು ಭಾಗಿಯಾಗುತ್ತಾರೆ. ಯಾವುದೇ ವದಂತಿಗಳಿಗೆ ನೌಕರರು ಕಿವಿಗೊಡಬಾರದು, ಕರ್ತವ್ಯಕ್ಕೆ ಗೈರುಹಾಜರಾಗುವ ಮೂಲಕ ಮುಷ್ಕರದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ಸರ್ಕಾರಿ ನೌಕರರ ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ ಸರ್ಕಾರದ ಉನ್ನತಾಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದೆ. ಬೇಡಿಕೆ ಈಡೇರುವವರೆಗೂ ಮುಷ್ಕರವನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದರು.
ಸರ್ಕಾರಿ ನೌಕರರಿಗೆ ೭ನೇ ವೇತನ ಆಯೋಗದ ಮಧ್ಯಂತರ ವರದಿ ಜಾರಿ ಮಾಡಬೇಕು. ಹಾಗೆಯೇ ಎನ್‌ಪಿಎಸ್ ರದ್ದು ಮಾಡಬೇಕು ಎಂಬ ೨ ಪ್ರಮುಖ ಬೇಡಿಕೆಗಳನ್ನಿಟ್ಟು ಮುಷ್ಕರಕ್ಕೆ ಕರೆ ನೀಡಲಾಗಿದೆ. ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಲಿದೆ ಎಂದರು.