ಮುಷ್ಕರ ಕೈಬಿಡಿ ಸಾರಿಗೆ ನೌಕರರಿಗೆ ಬೊಮ್ಮಾಯಿ ಮನವಿ


ಬೆಂಗಳೂರು, ಏ. ೧೯- ರಾಜ್ಯದ ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕೆಲಸಕ್ಕೆ ಹಾಜರಾಗಬೇಕು ಎಂದು ಗೃಹ ಸಚಿವ ಬಸವರಾಜಬೊಮ್ಮಾಯಿ ಮನವಿ ಮಾಡಿದ್ದಾರೆ.
ಆರ್‌ಟಿ ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಬೇರೆ ವಿಚಾರದ ಚರ್ಚೆಗೆ ಇಂದು ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸಾರಿಗೆ ನೌಕರರ ಮುಷ್ಕರ ಕೈಬಿಡುವಂತೆ ಮನವಿ ಮಾಡಿದ್ದೇನೆ ಎಂದರು.
ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೆಟ್ಟದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಷ್ಕರ ನಡೆಸುವುದು ಸರಿಯಲ್ಲ. ಮುಷ್ಕರ ಕೈಬಿಡಿ ನಿಮ್ಮ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ, ಸಾರಿಗೆ ಸಚಿವ ಲಕ್ಷ್ಮಣಸವದಿ ಜತೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದ್ದೇನೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಾರಿಗೆ ಸಚಿವ ಲಕ್ಷ್ಮಣಸವದಿ ಇಬ್ಬರೂ ಕ್ವಾರೈಂಟೈನಲ್ಲಿದ್ದಾರೆ ತೀರ್ಮಾನಗಳನ್ನುಕೈಗೊಳ್ಳಲು ಕೆ ಲ ದಿನಗಳು ಬೇಕಾಗುತ್ತದೆ. ಹಾಗಾಗಿ ಮುಷ್ಕರ ನಿಲ್ಲಿಸುವುದು ಸೂಕ್ತ ಎಂದು ಕೋಡಿಹಳ್ಳಿ ಅವರಿಗೆ ಹೇಳಿದ್ದೇನೆ ಎಂದು ಅವರು ಹೇಳಿದರು.
ಕಠಿಣ ಕ್ರಮ
ರಾಜ್ಯದಲ್ಲಿ ಕೊರೊನಾ ತಡೆಯಲು ಈಗಾಗಲೇ ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಜನ ನಿಯಮಗಳನ್ನು ಪಾಲಿಸಬೇಕು. ಜನರ ಸಹಕಾರವಿಲ್ಲದಿದ್ದರೆ ಕೋವಿಡ್ ತಡೆ ಕಷ್ಟವಾಗುತ್ತದೆ ಎಂದರು.
ಕೋವಿಡ್ ತಡೆ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೂ ಸಭೆ ನಡೆಸಿದ್ದೇವೆ. ಇಂದು ಸಂಜೆ ಬೆಂಗಳೂರು ನಗರ ಸಚಿವರು, ಶಾಸಕರ ಜತೆಯೂ ಸಭೆ ಇದೆ. ಈ ಸಭೆಯಲ್ಲೂ ಕೆಲವು ಕಠಿಣ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದರು.
ಜನ ಅನಗತ್ಯವಾಗಿ ಗುಂಪು ಸೇರುವುದನ್ನು ತಪ್ಪಿಸಲು ಸೆಕ್ಷನ್ ೧೪೪ ನ್ನು ಜಾರಿಗೊಳಿಸಬೇಕು ಎಂಬ ಒತ್ತಾಯಗಳು ಇವೆ. ಏನೇ ನಿಯಮ ಜಾರಿಯಾದರೂ ಜನರ ಸಹಕಾರ ಅವಶ್ಯ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಕೊರೊನಾ ತಡೆಗೆ ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಿದೆ ಎಂದು ಅವರು ಹೇಳಿದರು.