ಮುಷ್ಕರ ಕೈಬಿಡಿ ಕೆಲಸಕ್ಕೆ ಹಾಜರಾಗಿ ಸವದಿ ಮನವಿ

ಬೀದರ್, ಏ. ೭- ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಸರ್ಕಾರ ಸಿದ್ಧವಿದೆ. ಮುಷ್ಕರ ನಿಲ್ಲಿಸಿ ನೌಕರರು ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣಸವದಿ ಮನವಿ ಮಾಡಿದ್ದಾರೆ.
ಬೀದರ್‌ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ. ೮ ರಷ್ಟು ವೇತನ ಹೆಚ್ಚು ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ಸಂಬಂಧ ಚುನಾವಣಾ ಆಯೋಗಕ್ಕೂ ಪತ್ರ ಬರೆದು ವೇತನ ಹೆಚ್ಚಳ ಘೋಷಣೆಗೆ ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ. ಹಾಗಾಗಿ ನೌಕರರು ಮುಷ್ಕರ ನಿಲ್ಲಿಸಿ ನಾಳೆಯಿಂದ ಕೆಲಸಕ್ಕೆ ಹಾಜರಾಗಬೇಕು ಎಂದು ಮನವಿ ಮಾಡಿದರು.
ಸಾರಿಗೆ ನೌಕರರು ಈ ರೀತಿ ಮುಷ್ಕರ ನಡೆಸಿದರೆ ಸಂಸ್ಥೆಗೆ ನಷ್ಟವಾಗಿ ವೇತನ ನೀಡಲು ಕಷ್ಟವಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ನೌಕರರ ೯ ಬೇಡಿಕೆಗಳ ಪೈಕಿ ೮ನ್ನು ಈಡೇರಿಸಿದ್ದೇವೆ. ಆರನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡುವುದಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿ, ಶೇ. ೮ ರಷ್ಟು ವೇತನ ಏರಿಕೆಗೆ ಒಪ್ಪಿದೆ ಎಂದರು.
ಕೊರೊನಾ ಸಂದರ್ಭದಲ್ಲಿ ಈ ರೀತಿ ಮುಷ್ಕರ ನಡೆಸುವುದು ಸರಿಯಲ್ಲ. ಆರ್ಥಿಕ ಪರಿಸ್ಥಿತಿಯೂ ಸಂಕಷ್ಟದಲ್ಲಿದೆ. ಹಾಗಾಗಿ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ಎಂದು ಅವರು ಹೇಳಿದರು.