ಮುಷ್ಕರ ಕೈಬಿಡಿ ಇಲ್ಲವೆ ಎಸ್ಮಾ ಜಾರಿ : ಸಿಎಂ ಎಚ್ಚರಿಕೆ

ಬೆಳಗಾವಿ,ಏ,೭- ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿರುವ ಹಿನ್ನೆಲೆಯಲ್ಲಿ ಅವರನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಎಸ್ಮಾ ಜಾರಿ ಮಾಡಲು ಮುಂದಾಗಿದೆ.

ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಮಾತುಕತೆಗೆ ಬನ್ನಿ ಇಲ್ಲದಿದ್ದರೆ ಎಸ್ಮಾ ಜಾರಿ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನುವ ಮೂಲಕ ಸಾರಿಗೆ ನೌಕರರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಸ್ಮಾ ಜಾರಿ ಬಗ್ಗೆ ಚರ್ಚಿಸಲಾಗುತ್ತಿದೆ. ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ನೌಕರರು ಮುಷ್ಕರವನ್ನ ಸ್ವಾರ್ಥಕ್ಕಾಗಿ ಮಾಡುತ್ತಿದ್ದಾರೆ. ಸಾರಿಗೆ ನೌಕರರು ಮುಷ್ಕರ ಕೈ ಬಿಟ್ಟು ಮಾತುಕತೆಗೆ ಬನ್ನಿ ಯಾರ ಜತೆಯಾದರೂ ಸರಿ ಮಾತುಕತೆಗೆ ಸಿದ್ದ ಎಂದು ಹೇಳಿದರು.

ಖಾಸಗೀ ಬಸ್ : ಎಚ್ಚರಿಕೆ

ಖಾಸಗಿ ಬಸ್ ನವರು ದುಬಾರಿ ಹಣ ವಸೂಲಿ ಮಾಡಿದರೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಾರಿಗೆ ಸಂಸ್ಥೆಯ ಬಸ್ಸುಗಳು ಸಂಚಾರ ಆರಂಭಿಸಿದ ಹಿನ್ನೆಲೆಯಲ್ಲಿ ಖಾಸಗಿ ಬಸ್ ಗಳಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಆದರೆ ಇದನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಅವರು ಹೇಳಿದ್ದಾರೆ

ವೇತನ ತಡೆಗೆ ನಿರ್ಧಾರ:

ರಾಜ್ಯ ಸರಕಾರಕ್ಕೆ ಸಡ್ಡು ಹೊಡೆದು ಮುಷ್ಕರ ಆರಂಭಿಸಿರುವ ರಾಜ್ಯ ರಸ್ತೆ ಸಾರಿಗೆ ನೌಕರರ ಮಾರ್ಚ್ ತಿಂಗಳ ವೇತನ ಪಡೆಯುವ ಮೂಲಕ ನೌಕರರಿಗೆ ಎಚ್ಚರಿಕೆ ನೀಡಲು ಸರ್ಕಾರ ಮುಂದಾಗಿದೆ. ನೌಕರರು ಕೂಡಲೇ ಮುಷ್ಕರವನ್ನು ವಾಪಸ್ ಪಡೆದು ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ