ಮುಷ್ಕರ ಕೈಬಿಟ್ಟು ಸೇವೆಯನ್ನು ಮುಂದುವರೆಸಲು ಆಗ್ರಹ

ರಾಯಚೂರು.ಏ.೧೯- ರಾಜ್ಯದಲ್ಲಿ ಕೋವಿಡ್-೧೯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸಾರಿಗೆ ನೌಕರರು ಹೋರಾಟವನ್ನು ಸ್ಥಗಿತಗೊಳಿಸಿ ಕೂಡಲೇ ಸೇವೆಗೆ ಹಾಜರಾಗಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಇವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕಳೆದ ೧೨ ದಿನಗಳಿಂದ ಸಾರಿಗೆ ನೌಕರರು ಬೇಡಿಕೆಗಳಿಗೆ ಒತ್ತಾಯಿಸಿ ಸರ್ಕಾರದ ಮೇಲೆ ಒತ್ತಡ ಹಾಕಿ ಮುಷ್ಕರವನ್ನು ಮುಂದುವರೆಸಿದ್ದಾರೆ. ಕೂಡಲೇ ಮುಷ್ಕರವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಸರ್ಕಾರ ಹಂತ ಹಂತವಾಗಿ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುತ್ತಿದೆ. ಈ ಮುಷ್ಕರದಿಂದ ಬಸ್‌ಗಳಿಗೆ ಹಾನಿ, ಸಾವು ನೋವುಗಳು ನಡೆದಿವೆ. ಕೂಡಲೇ ಮುಷ್ಕರವನ್ನು ಕೈಬಿಟ್ಟು ಸೇವೆಯನ್ನು ಮುಂದುವರೆಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿ.ಎಚ್. ರವಿಕುಮಾರ, ಮಲ್ಲಿಕಾರ್ಜುನರೆಡ್ಡಿ, ಬಡೆಸಾಬ್, ನರಸಿಂಹಲು, ಸೋಮರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.