ಮುಷ್ಕರದ 2ನೇ ದಿನ ಖಾಸಗಿ ವಾಹನ ಸೇವೆ: ಪ್ರಯಾಣಿಕರು ಸ್ವಲ್ಪ ನಿರಾಳ

ಕಲಬುರಗಿ ಏ 8: ಸಾರಿಗೆ ನೌಕರರ ಮುಷ್ಕರ ಎರಡನೆಯ ದಿನಕ್ಕೆ ಕಾಲಿಟ್ಟಿದೆ. ಪರ್ಯಾಯವಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರ ಅನುಕೂಲಕ್ಕಾಗಿ ಖಾಸಗಿ ವಾಹನಗಳಿಗೆ ಅನುಮತಿ ನೀಡಿದೆ.ಇದರಿಂದ ಮುಷ್ಕರದ ಬಿಸಿಯ ನಡುವೆ ಸ್ವಲ್ಪ ನಿರಾಳತೆ ಮೂಡಿದೆ .
ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದು ಖಾಸಗಿ ಬಸ್, ಜೀಪುಗಳ ಕಲರವ ಕೇಳಿ ಬರುತ್ತಿದೆ.ಆದರೆ ಕೇಂದ್ರ ಬಸ್ ನಿಲ್ದಾಣದಲ್ಲಿ ಎಂದಿನಂತೆ ಪ್ರಯಾಣಿಕರ ಸಂಖ್ಯೆ ಅಷ್ಟಾಗಿ ಇರಲಿಲ್ಲ.
ದೂರದ ಊರುಗಳಾದ ಹೈದರಾಬಾದ ,ವಿಜಯಪುರ,ಶಹಾಪುರ,ಬೀದರ ಮೊದಲಾದ ಕಡೆ ಹೋಗಲು ಖಾಸಗಿ ಬಸ್‍ಗಳು ಸಿದ್ಧವಾಗಿ ನಿಂತ ದೃಶ್ಯ ಕಂಡು ಬಂತು.ಈ ನಡುವೆ ಬೆರಳೆಣಿಕೆಯ ಸಾರಿಗೆ ಸಂಸ್ಥೆಯ ನೌಕರರು ಜನರ ಪರದಾಟ ತಪ್ಪಿಸಲು ಬಸ್ ಓಡಿಸಲು ಮುಂದೆ ಬಂದಿದ್ದಾಗಿ ಹೇಳಿ ಪ್ರಯಾಣಿಕರ ಪ್ರಶಂಸೆಗೆ ಪಾತ್ರರಾದರು.
ಖಾಸಗಿಯವರು ದುಬಾರಿ ಪ್ರಯಾಣದರ ವಿಧಿಸುತ್ತಾರೆ ಎಂಬ ಆರೋಪ ಪ್ರಯಾಣಿಕರಿಂದ ಕೇಳಿ ಬಂತು.ಕಲಬುರಗಿಯಿಂದ 38 ಕಿಮೀ ಅಂತರದ ಜೇವರಗಿಗೆ 90 ರಿಂದ 100.ರೂ ದರ ವಿಧಿಸಲಾಗುತ್ತಿದೆ ಎಂದು ಪ್ರಯಾಣಿಕರು ದೂರಿದರು.ಸಂಭವನೀಯ ಅಹಿತಕರ ಘಟನೆ ತಡೆಯಲು ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ನಗರ ಸಾರಿಗೆ ನಿಲ್ದಾಣಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.