ಮುಷ್ಕರದ ನಡುವೆ ಸಾರಿಗೆ ಸಂಚಾರ

ಹುಬ್ಬಳ್ಳಿ ಏ 19 : ಆರನೇ ವೇತನ ಆಯೋಗ ಅನ್ವಯ ವೇತನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರ ಮುಷ್ಕರವು ಇಂದಿಗೆ 13 ನೇ ದಿನ ಕಾಲಿಟ್ಟಿದ್ದು, ಮುಷ್ಕರದ ನಡೆವೆಯೂ ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಗ್ರಾಮಾಂತರ ಹಾಗೂ ನಗರ ಘಟಕಗಳಿಂದ ಸುಮಾರು 116 ಬಸ್‍ಗಳು ಇಂದು ಸಂಚರಿಸುತ್ತಿವೆ.
ನಗರದ ಪ್ರದೇಶಗಳಿಗೆ 70 ಬಸ್‍ಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ 46 ಬಸ್‍ಗಳು ಸಂಚರಿಸುತ್ತಿದ್ದು, ಸಾರಿಗೆ ನೌಕರರು ಭದ್ರತೆಯಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಮಧ್ಯಾಹ್ನದವರೆಗೂ ಇನ್ನೂ ಹೆಚ್ಚಿನ ಬಸ್ ಸಂಚಾರ ಆರಂಭವಾಗಲಿದ್ದು, ಸಾರ್ವಜನಿಕರಿಗೆ ಹೆಚ್ಚಿನ ಸಾರಿಗೆ ಸಂಪರ್ಕ ಕಲ್ಪಿಸುವ ಉದ್ದೇಶ ನಮ್ಮದಾಗಿದೆ ಎಂದು ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಸಂಜೆವಾಣಿಗೆ ತಿಳಿಸಿದರು.
ಬೇಡಿಕೆ ಈಡೇರಿಕೆಗಾಗಿ ಸರ್ಕಾರ ಹಾಗೂ ಸಾರಿಗೆ ನೌಕರರ ಹಗ್ಗ ಜಗ್ಗಾಟದ ಮುಂದುವರೆದಿದ್ದು, ಇತ್ತ ಸಾರಿಗೆ ನೌಕರರು ತಮ್ಮ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ಮಾಡುತ್ತಿದ್ದರೇ ಕೆಲ ಸಾರಿಗೆ ನೌಕರರು ತಮ್ಮ ಕರ್ತವ್ಯಕ್ಕೆ ಹಾಜರಾಗುತ್ತಿದ್ದು ಸಾರ್ವಜನಿಕರು ನಿರಾಳಗೊಂಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣಕ್ಕೆ ಆಗಮಿಸಿದ ಹು-ಧಾ ಉಪ ಪೆÇೀಲಿಸ್ ಆಯುಕ್ತ ವಿನೋದಕುಮಾರ ಮುಕ್ತೆದಾರ ಮತ್ತು ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಕರ್ತವ್ಯನಿರತ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಮನಗೌಡರ ಅವರು, ದಿನದಿಂದ ದಿನಕ್ಕೆ ಸಿಬ್ಬಂದಿ ಹಾಜರಾತಿ ಹೆಚ್ಚಾಗುತ್ತಿದೆ. ಸಾರಿಗೆ ಸಿಬ್ಬಂದಿಗಳು ಯಾವುದೇ ಭಯವಿಲ್ಲದೇ ಕರ್ತವ್ಯಕ್ಕೆ ಹಾಜರಾಗಿ ಎಂದು ಅವರು ಮನವಿ ಮಾಡಿಕೊಂಡರು.
ಪೆÇಲೀಸ್ ಅಧಿಕಾರಿ ವಿನೋದಕುಮಾರ ಮುಕ್ತೆದಾರ ಮಾತನಾಡಿ ಕರ್ತವ್ಯ ನಿರತ ಸಿಬ್ಬಂದಿಗೆ ಎಲ್ಲ ರೀತಿಯ ರಕ್ಷಣೆ ನೀಡಲಾಗುವುದು. ಮುಷ್ಕರ ನಿರತರಿಂದ ಯಾವುದೇ ಅಡೆತಡೆ, ಬೆದರಿಕೆ ಬಂದರೆ ಕೂಡಲೆ ಸಂಸ್ಥೆಯ ಮತ್ತು ಪೆÇಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿ ಐ.ಎ. ಕಂದಗಲ್ ಮತ್ತು ವಿಭಾಗೀಯ ಸಂಚಾರ ಅಧಿಕಾರಿ ಎಸ್.ಎಸ್. ಮುಜುಂದಾರ ಮತ್ತಿತರರು ಇದ್ದರು.